ಹೈದರಾಬಾದ್: ಚಂದಮಾಮನ ಅಂಗಳಕ್ಕೆ ಚಂದ್ರಯಾನ-2 ಇಳಿಯಲು ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದ್ದು, ಎಲ್ಲ ಹಂತದ ಕಾರ್ಯ ಇಸ್ರೋದಿಂದ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಶನಿವಾರ ರಾತ್ರಿ ಫೈನಲ್ ಹಂತದ ಕೆಲಸ ಆರಂಭಗೊಳ್ಳಲಿದೆ.
ಸೆ.7ರಂದು ತಡರಾತ್ರಿ 1ರಿಂದ 2ಗಂಟೆ ನಡುವ ಲ್ಯಾಂಡರ್ ಚಂದ್ರನ ಅಂಗಳದ ಕಡೆಗೆ ಇಳಿಯುವ ಕಕ್ಷಾವತರಣ ಕ್ರಿಯೆ ಆರಂಭಗೊಳ್ಳಲಿದ್ದು, ಇದಾದ ಬಳಿಕ 1.30ರಿಂದ 2.30ರ ನಡುವೆ ಟಚ್‌ಡೌನ್ ಪ್ರಕ್ರಿಯೆ ನಡೆಯಲಿದೆ. ಇದಾದ ಬಳಿಕ ಬೆಳಗ್ಗೆ 5.30ರಿಂದ 6.30ರ ನಡುವೆ ವಿಕ್ರಮ್ ಲ್ಯಾಂಡರ್ ಒಳಗಿಂದ ರೋವರ್ ಪ್ರಗ್ಯಾನ್ ಹೊರ ಬಂದು ಚಂದ್ರನ ಅಂಗಳದ ಮೇಲೆ ಇಳಿಯಲಿದೆ. ಇಲ್ಲಿಗೆ ಇಳಿದ ಬಳಿಕ ಚಂದ್ರನ ಅಧ್ಯಯನದಲ್ಲಿ ಇದು ನಿರತವಾಗಲಿದೆ. ಚಂದ್ರನ ಸ್ಪರ್ಶಿಸುವ ಕೊನೆಯ 15 ನಿಮಿಷ ನಮಗೆ ಸತ್ವಪರೀಕ್ಷೆ ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ಹೇಳಿದ್ದಾರೆ.
ಅತಿ ಕ್ಲಿಷ್ಟಕರವಾದ ಯೋಜನೆ ರಿಮೋಟ್ ಕಂಟ್ರೋಲ್ ಮೂಲಕ ನಡೆಯಲಿದ್ದು, ಕ್ಯಾಮರಾ ಮತ್ತು ಸೆನ್ಸರ್ ನೀಡುವ ಮಾಹಿತಿ ಆಧರಿಸಿ ಕಾರ್ಯ ನಡೆಸಲಾಗುತ್ತದೆ. ಇದಕ್ಕಾಗಿ ವಿಶೇಷ ಪ್ರೋಗ್ರಾಮ್ ಸಹ ನಿರ್ಮಾಣ ಮಾಡಲಾಗಿದ್ದು, ಇದೊಂದು ಐತಿಹಾಸಿಕ ಸಾಧನೆಯಾಗಲಿದೆ.
ಚಂದ್ರಯಾನ-2 ಚಂದ್ರನ ಅಂಗಳಕ್ಕೆ ಇಳಿಯುವ ಕಾರ್ಯವನ್ನ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಬಂದು ಮಕ್ಕಳೊಂದಿಗೆ ವೀಕ್ಷಣೆ ಮಾಡಲಿದ್ದಾರೆ.