ಆಜಂಘರ್ (ಯುಪಿ): ಕಳೆದ ಲೋಕಸಭೆ ಚುನಾವಣೆಯಲ್ಲಿ ಭಾರಿ ಸುದ್ದಿ ಮಾಡಿದ್ದ ನರೇಂದ್ರ ಮೋದಿ ಅವರ 'ಚಾಯ್ವಾಲ' ಘೋಷಣೆಗೆ ಈ ಬಾರಿ ಎಸ್ಪಿಯ ಅಖಿಲೇಶ್ ಯಾದವ್ 'ದೂದ್ವಾಲ' (ಹಾಲು ಮಾರುವವರು)ಎಂಬ ಪ್ರತಿ ಘೋಷಣೆ ಪರಿಚಯಿಸಿದ್ದಾರೆ.
ಬಿಎಸ್ಪಿ ಜತೆ ಕೈ ಜೋಡಿಸಿರುವ ಉತ್ತರಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್, ಪ್ರಧಾನಿ ಮೋದಿ ವಿರುದ್ಧ ರಾಜಕೀಯ ಸಮರ ಸಾರಿದ್ದಾರೆ. ನಿನ್ನೆ ಆಜಂಘರ್ ಸಂಸತ್ ಕ್ಷೇತ್ರ ಪ್ರಚಾರದ ವೇಳೆ, ದೂದ್ ವಾಲ ಎಂಬ ಪ್ರತಿ ಘೋಷಣೆ ಸಾರಿದರು. ಮೋದಿ ಚಾಯ್ವಾಲನಾದರೆ, ನಾವು ದೂದ್ವಾಲರು. ಒಳ್ಳೆಯ ಹಾಲಿಲ್ಲದೆ, ಒಳ್ಳೆಯ ಟೀ ಮಾಡಲು ಸಾಧ್ಯವೇ ಇಲ್ಲ ಎಂದು ಕುಟುಕಿದ್ದಾರೆ.
ಎಸ್ಪಿ, ಬಿಎಸ್ಪಿ ಹಾಗೂ ರಾಷ್ಟ್ರೀಯ ಲೋಕದಳ ಸೇರಿರುವುದು ಮಹಾಮಿಲಾವತ್ ಎಂದು ಬಿಜೆಪಿಗರು ವ್ಯಂಗ್ಯವಾಡುತ್ತಾರೆ. 38 ಪಕ್ಷಗಳು ನಿಮ್ಮೊಟ್ಟಿಗೆ ಸೇರಿರುವುದನ್ನು ಏನನ್ನಬೇಕು? ಎಂದು ಪ್ರಶ್ನಿಸಿದರು. ಬಿಜೆಪಿಗರ ವಿರುದ್ಧ ವಾಗ್ದಾಳಿಯನ್ನೂ ನಡೆಸಿದರು.