ತಿರುವನಂತಪುರಂ : ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಕೇರಳದ ಅತಿಯಾದ ವಿಶ್ವಾಸ, ರೋಗವನ್ನು ಸರಿಯಾಗಿ ನಿಭಾಯಿಸುವ ಬದಲು, ರಾಜ್ಯದಲ್ಲಿ ತೊಂದರೆಗಳಿಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟ ಕೇಂದ್ರದ ಸಚಿವರೊಬ್ಬರಿಗೆ, ಕೇರಳ ಸಚಿವರೊಬ್ಬರು 'ಥರ್ಡ್ ರೇಟ್ ರಾಜಕಾರಣಿ' ಎಂದು ವಾಗ್ದಾಳಿ ನಡೆಸಿದ್ದಾರೆ.
"ಪಿಣರಾಯಿ ವಿಜಯನ್ ಸರ್ಕಾರದ ಅತಿಯಾದ ವಿಶ್ವಾಸದಿಂದಾಗಿ, ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ. ಆ ಜಿಲ್ಲೆಗಳನ್ನು ಗ್ರೀನ್ ಝೋನ್ ಎಂದು ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಅಲ್ಲಿ ಹೊಸ ಪ್ರಕರಣ ಕಾಣಿಸಿಕೊಳ್ಳಲು ಪ್ರಾರಂಭವಾಗೊಂಡಿವೆ" ಎಂದು ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಮುರಳೀಧರನ್ ತಮ್ಮ ಫೇಸ್‌ಬುಕ್‌ನಲ್ಲಿ ಬರೆದಿದ್ದರು. ಮುರಳೀಧರನ್ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜ್ಯ ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್, ಮುರಳೀಧರನ್ ಥರ್ಡ್ ರೇಟ್ ರಾಜಕಾರಣಿ ಜರಿದಿದ್ದರು.
"ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತ್, ದೆಹಲಿ ಮತ್ತು ಮುಂಬೈಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗಮನಿಸಿ. ಅಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಅಲ್ಲಿ ಪರಿಹಾರ ಕಂಡುಕೊಳ್ಳುವ ಬದಲು, ಮುರಳೀಧರನ್ ಥರ್ಡ್ ರೇಟ್ ರಾಜಕಾರಣಿಯಂತೆ ಮಾತನಾಡುತ್ತಿದ್ದಾರೆ" ಎಂದು ಸುರೇಂದ್ರನ್ ಕಿಡಿಕಾರಿದ್ದಾರೆ.
ಕಳೆದ ವಾರ ಹಸಿರು ವಲಯ ಎಂದು ಘೋಷಣೆಯಾಗಿ ಲಾಕ್ಡೌನ್ನಿಂದ ಸಡಿಲಿಕೆಗೊಂಡಿದ್ದ ಇಡುಕ್ಕಿ ಮತ್ತು ಕೊಟ್ಟಾಯಂನಲ್ಲಿ ಹಠಾತ್ ಆಗಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಹೀಗಾಗಿ ಎರಡೂ ಜಿಲ್ಲೆಗಳನ್ನು ಕೆಂಪು ವಲಯವನ್ನಾಗಿ ಘೋಷಿಸಲಾಗಿದೆ. ಈಗ ಕಟ್ಟುನಿಟ್ಟಾದ ಲಾಕ್‌ಡೌನ್ ಜಾರಿಯಲ್ಲಿದೆ.