ನವದೆಹಲಿ: ದೇಶಾದ್ಯಂತ ಮೂರನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದ್ದು, ಮೇ.17ರವರೆಗೆ ಮುಂದುವರಿಯಲಿದೆ. ಈ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಡಿಯೋ ಸಂವಾದದಲ್ಲಿ ಭಾಗಿಯಾಗಿ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಲಾಕ್‌ಡೌನ್ 3.0 ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗುತ್ತಿದೆ. ಇದು ಆನ್-ಆಫ್ ಎಲೆಕ್ಟ್ರಿಕ್ ಸ್ವಿಚ್ ಅಲ್ಲ. ಈ ಕಾಲಾವಧಿ ಮುಕ್ತಾಯಗೊಂಡ ಬಳಿಕ ಯಾವ ರೀತಿಯ ಯೋಜನೆ ರೂಪಿಸಬೇಕು ಎಂಬುದರ ಕುರಿತು ಕೇಂದ್ರ & ರಾಜ್ಯ ಸರ್ಕಾರ ನಿರ್ಧರಿಸಬೇಕು. ಲಾಕ್‌ಡೌನ್ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಕ್ರಮಗಳು ಪಾರದರ್ಶಕವಾಗಿರಲಿ. ಆದ್ರೆ, ನಿರ್ಬಂಧಿತ ಸಮಯ ಮುಗಿದ ಬಳಿಕ ದೇಶದಲ್ಲಿ ಯಾವ ರೀತಿಯ ನಿರ್ಧಾರ ಕೈಗೊಳ್ಳಬೇಕು ಎಂಬುದರ ಕುರಿತು ಮೋದಿಗೆ ಸ್ಪಷ್ಟತೆ ಇಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದರು.
ಲಾಕ್‌ಡೌನ್ ವೇಳೆ ನಾವು ಸಮಯ ವ್ಯರ್ಥ ಮಾಡುತ್ತಿದ್ದು, ಇದರಿಂದ ದೇಶ ಭವಿಷ್ಯದಲ್ಲಿ ಕೆಟ್ಟ ಪರಿಣಾಮ ಎದುರಿಸಲಿದೆ. ದೇಶೀಯ ವಸ್ತುಗಳ ಬಳಕೆ ಮಾಡಲು ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ಕೊಟ್ಟರು.
ಕೇಂದ್ರ ಸರ್ಕಾರ ಕೆಂಪು, ಕಿತ್ತಳೆ ಹಾಗೂ ಹಸಿರು ವಲಯಗಳೆಂದು ಘೋಷಿಸುವುದು ಬೇಡ. ಜಿಲ್ಲಾಧಿಕಾರಿ ಹಾಗೂ ರಾಜ್ಯ ಸರ್ಕಾರ ಇದರ ಬಗ್ಗೆ ಕ್ರಮ ಕೈಗೊಳ್ಳಲಿ. ಕೊರೊನಾ ಪರಿಸ್ಥಿತಿ ಜಿಲ್ಲಾ ಮಟ್ಟದಲ್ಲಿ ನಿಭಾಯಿಸಬೇಕೇ ಹೊರತು ಇದು ಪ್ರಧಾನ ಮಂತ್ರಿಗಳ ಕಚೇರಿಯಿಂದ ಆಗುವಂಥದಲ್ಲ ಎಂದಿದ್ದಾರೆ.