ಇಂದೋರ್: ಪಾಕ್ ಆಕ್ರಮಿತ ಕಾಶ್ಮೀರದ ಬಾಲಕೋಟ್ನಲ್ಲಿ ಉಗ್ರರ ನೆಲೆಗಳ ಮೇಲೆ ಭಾರತದ ವಾಯುಪಡೆ ನಡೆಸಿದ ಏರ್ಸ್ಟ್ರೈಕ್ ಬಗ್ಗೆ ಕೇಂದ್ರ ಸರ್ಕಾರ ಸಾಕ್ಷಿ ನೀಡಲೇಬೆಕೆಂದು ಪ್ರತಿಪಕ್ಷಗಳು ಒತ್ತಡ ಹೇರುತ್ತಿವೆ.
ಇದೀಗ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಸಹ ಕೇಂದ್ರ ಸರ್ಕಾರ ಸಾಕ್ಷಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಇಂದೋರ್ನಲ್ಲಿ ಮಾತನಾಡಿದ ಅವರು, ನಾನು ವಾಯುಪಡೆಯ ಏರ್ಸ್ಟ್ರೈಕ್ ಬಗ್ಗೆ ಪ್ರಶ್ನಿಸುತ್ತಿಲ್ಲ. ಆದ್ರೆ ಸ್ಯಾಟಲೈಟ್ ತಂತ್ರಜ್ಞಾನದ ಮೂಲಕ ಯಾವುದೇ ಘಟನೆಗಳ ಚಿತ್ರಗಳು ಸೆರೆಯಾಗಿರುತ್ತವೆ. ಇದೇ ಸಾಕ್ಷಿಯನ್ನು ಭಾರತ ನೀಡಬಹುದು. ಒಸಾಮ ಬಿನ್ ಲಾಡನ್ನನ್ನು ಅಮೆರಿಕ ಹೊಡೆದುರುಳಿಸಿದಾಗ ಇಂತಹುದೇ ಸಾಕ್ಷಿಯನ್ನು ನೀಡಿತ್ತು ಎಂದಿದ್ದಾರೆ.
ಈ ವೇಳೆ ವಿಂಗ್ ಕಮ್ಯಾಂಡರ್ ಅಭಿನಂದನ್ರನ್ನು ಭಾರತಕ್ಕೆ ಹಸ್ತಾಂತರಿಸುವ ಮೂಲಕ ಪಾಕಿಸ್ತಾನ ಒಳ್ಳೆಯ ನೆರೆ ರಾಷ್ಟ್ರ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ತೋರಿಸಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಎಂದರು. ಜತೆಗೆ, ಹಫೀಜ್ ಸೈಯದ್ ಹಾಗೂ ಮಸೂದ್ ಅಜರ್ನ ವಿರುದ್ಧ ಕ್ರಮ ಕೈಗೊಳ್ಳುವಲ್ಲಿಯೂ ಇಮ್ರಾನ್ ಧೈರ್ಯ ಮಾಡಬೇಕು ಎಂದು ದಿಗ್ವಿಜಯ್ ಸಿಂಗ್ ಒತ್ತಾಯಿಸಿದ್ದಾರೆ.