ನವದೆಹಲಿ: ಕೋವಿಡ್-19 ತಡೆಗಟ್ಟಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಲು ಮತ್ತು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡುವ ಮಾಹಿತಿ ತಂತ್ರಜ್ಞಾನ ಆಧಾರಿತ ಮಾದರಿಗೆ ಪ್ರಧಾನಿ ಮೋದಿ ಸರ್ಕಾರ ಪ್ರಶಂಸೆ ವ್ಯಕ್ತಪಡಿಸಿದೆ.
ಕರ್ನಾಟಕ ಕೋವಿಡ್-19 ಮ್ಯಾನೇಜ್ಮೆಂಟ್, ಕೊರೊನಾ ಸೋಂಕಿತರ ಪತ್ತೆ ಹಚ್ಚುವುದು ಮತ್ತು ನೇರ ಅಥವಾ ಫೋನ್ ಮೂಲಕ 1.5 ಕೋಟಿಗೂ ಅಧಿಕ ಮನೆಗಳಿಂದ ಸಮೀಕ್ಷೆ ಮಾಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಇಲಾಖೆ, ಕರ್ನಾಟಕ ಸರ್ಕಾರ ಸ್ವಯಂ ಪ್ರೇರಿತವಾಗಿ ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚಲು ಐಟಿ ಆಧಾರಿತ ಸಲಹೆ ಮತ್ತು ಬಹುವಲಯದ ಏಜೆನ್ಸಿಗಳ ನೆರವಿನಿಂದ ಸರ್ಕಾರದ ಭಾಗವಾಗಿ 'ಹೋಲ್ ಆಫ್ ಗರ್ವಮೆಂಟ್'(ಡಬ್ಲ್ಯೂಒಜಿ) ಅನ್ನು ಅಭಿವೃದ್ಧಿಪಡಿಸಿ ಇದರ ಮೂಲಕ ಕೆಲಸ ಮಾಡುತ್ತಿದೆ ಎಂದು ಹೇಳಿದೆ.
ಸಿಎಂ ಯಡಿಯೂರಪ್ಪ ಸರ್ಕಾರ ಟ್ರೇಸ್ ಅಂಡ್ ಟ್ರ್ಯಾಕ್ಅನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಮಹಾಮಾರಿ ಕೋವಿಡ್ ಹರಡುವುದನ್ನ ತಡೆಯುವುಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದೆ.
ಕಾಂಟ್ಯಾಕ್ಟ್ ಎಂಬುದರ ಕೇಂದ್ರ ಸರ್ಕಾರದ ವಾಖ್ಯಾನುಸಾರ ಕರ್ನಾಟಕ ಹೆಚ್ಚು ಅಪಾಯಕಾರಿ ಮತ್ತು ಕಡಿಮೆ ಅಪಾಯ ಇರುವಂತಹ ಕಾಂಟ್ಯಾಕ್ಟ್‌ಗಳನ್ನು ಪತ್ತೆ ಹಚ್ಚಿ ಕಟ್ಟುನಿಟ್ಟಾಗಿ ಕ್ವಾರಂಟೈನ್‌ಗೆ ಒಳಪಡಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮೆಚ್ಚುಗೆ ವ್ಯಕ್ತಪಡಿಸಿದೆ.