ನವದೆಹಲಿ: ಕೊರೊನಾ ಲಸಿಕೆ ಪಡೆದ ಜನರು ಆರೋಗ್ಯವಾಗಿದ್ದು, ಯಾವುದೇ ಪ್ರತಿಕೂಲ ಪರಿಣಾಮ ಬೀರಿಲ್ಲ. ನಿಗದಿತ ಶೇ. 97ರಷ್ಟು ಮಂದಿ ಲಸಿಕೆ ವಿತರಣ ಹಂತದಿಂದ ತೃಪ್ತಿ ಹೊಂದಿದ್ದಾರೆ. ಅಲ್ಲದೆ ಕೊರೊನಾ ಲಸಿಕೆಯ ಅಡ್ಡ ಪರಿಣಾಮದಿಂದ ಯಾರೊಬ್ಬರೂ ಸಾವನ್ನಪ್ಪಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಈ ಹಿಂದೆ ಲಸಿಕೆ ಪಡೆದ ಇಬ್ಬರ ಸಾವಿನ ಕುರಿತ ಹೆಚ್ಚಿನ ವಿಚಾರಣೆಯಲ್ಲಿ ಅವರ ಸಾವಿಗೆ ಕೊರೊನಾ ಲಸಿಕೆ ಕಾರಣವಾಗಿಲ್ಲ ಎಂಬುದನ್ನು ಸಮಿತಿ ದೃಢಪಡಿಸಿದೆ. ಇಬ್ಬರೂ ಸಹ ಕೆಲ ಅಂಗಾಂಗ ವೈಫಲ್ಯದಿಂದ ಸಾವನಪ್ಪಿರುವ ಕುರಿತಾಗಿ ರಾಷ್ಟ್ರಮಟ್ಟದ ಎಇಎಫ್ಐ ಕಮಿಟಿ ತನ್ನ ವರದಿರಲ್ಲಿ ತಿಳಿಸಿದೆ. ಇವರಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಮಾಹಿತಿ ನೀಡಿದೆ.
ಅಲ್ಲದೆ ಲಸಿಕೆ ಪಡೆಯಲು ಇನ್ನೂ ನೋಂದಾಯಿಸದ ಫ್ರಂಟ್ ಲೈನ್ ವಾರಿಯರ್ಸ್ ಫೆ. 24ರ ಒಳಗೆ ಕೋ-ವಿನ್ ಆ್ಯಪ್ನಲ್ಲಿ ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ. ಮಾರ್ಚ್ 24ರ ಒಳಗಾಗಿ ಎಲ್ಲಾ ಕೊರೊನಾ ವಾರಿಯರ್ಸ್ಗೂ ಲಸಿಕೆ ತಲುಪಿಸುವ ಗುರಿಯನ್ನು ಹೊಂದಲಾಗಿದೆ. ಅಲ್ಲದೆ ಆ ವೇಳೆಗೆ ದೇಶದ 27 ಕೋಟಿ ಜನರಿಗೆ ಲಸಿಕೆ ತಲುಪಿಸುವ ಗುರಿಯೂ ಇದೆ ಎಂದು ಇಲಾಖೆ ತಿಳಿಸಿದೆ.
ಇಷ್ಟಲ್ಲದೆ ದೇಶದ ಅತೀ ಹೆಚ್ಚು ಸಕ್ರಿಯ ಪ್ರಕರಣಗಳು ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕಂಡು ಬಂದಿದೆ ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾಹಿತಿ ನೀಡಿದ್ದಾರೆ. ಇದು ದೇಶದ ಒಟ್ಟಾರೆ ಶೇ. 71ರಷ್ಟಿದೆ ಎಂದಿದ್ದಾರೆ.
ಇದನ್ನೂ ಓದಿ: ಕೊರೊನಾ ಬಿಕ್ಕಟ್ಟು: ₹6 ಸಾವಿರ ಕೋಟಿ ಅನುದಾನ ಬಿಡುಗಡೆ, ಕರ್ನಾಟಕಕ್ಕೆ ಎಷ್ಟು?