ಈ ಹಿಂದಿನ ಮುಂಗಡಪತ್ರಗಳು ಬಡವರು, ರೈತರು, ಅಸಂಘಟಿತ ಕಾರ್ಮಿಕರು ಹಾಗೂ ಸಮಾಜದ ಕೆಳಸ್ತರಗಳ ಜನರ ಮೇಲೆ ಬಹಳ ಸಲ ಗಮನ ಕೇಂದ್ರೀಕರಿಸಿದ್ದರೂ ಇಂದು ಜನ ಸಾಮಾನ್ಯರ ಕೈಗೆ ಹೆಚ್ಚೆಚ್ಚು ಹಣ ನೀಡಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ. ಇದನ್ನು, ಒಂದೋ ಆದಾಯ ತೆರಿಗೆಯನ್ನು ಕಡಿತಗೊಳಿಸಿ, ಉದ್ಯೋಗ ಸೃಷ್ಟಿಸುವ ಮೂಲಕ ಮಾಡಬೇಕು; ಇಲ್ಲವೇ ಹಣಕಾಸಿನ ಲಿಕ್ವಿಡಿಟಿಯ ಸ್ಥಿತಿಗತಿಗಳನ್ನು ಸುಧಾರಿಸುವ ಮೂಲಕ ಮಾಡಬೇಕಾಗುತ್ತದೆ.
ಕೆಲವು ತಿಂಗಳ ಹಿಂದೆ ಸೀತಾರಾಮನ್ ಅವರು ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸಿದ್ದರು. ತನ್ನ ಆದಾಯ ಹೆಚ್ಚುತ್ತದೆ ಎಂಬ ನಿರೀಕ್ಷೆಯಲ್ಲಿರುವ ಸಾಮಾನ್ಯ ಮನುಷ್ಯನ ನಿರೀಕ್ಷೆಯನ್ನು ಇದು ಹೆಚ್ಚಿಸಿತು.
ನಮ್ಮದು ಬರೋಬ್ಬರಿ 130 ಕೋಟಿ ಜನರಿರುವ ದೇಶ. ಆದರೆ ಆದಾಯ-ತೆರಿಗೆ ಸಲ್ಲಿಸುವ ಜನರ ಸಂಖ್ಯೆ ಕೇವಲ 5.65 ಕೋಟಿ ಎಂಬುದನ್ನು ಗಮನಿಸಬೇಕಾಗುತ್ತದೆ. ಮಾನ್ಯ ಹಣಕಾಸು ಸಚಿವರು ವೈಯಕ್ತಿಕ ಆದಾಯ ತೆರಿಗೆ ದರವನ್ನು ಮತ್ತಷ್ಟು ಸಡಿಲಗೊಳಿಸಬಹುದು ಎಂಬ ನಿರೀಕ್ಷೆ ಎಲ್ಲರದ್ದಾಗಿದೆ. ಸದ್ಯದ ಮಟ್ಟಿಗೆ 5 ಲಕ್ಷ ರೂಪಾಯಿಗಳವರೆಗೂ (ರಿಬೇಟ್‍ನ್ನೂ ಒಳಗೊಂಡು) ಆದಾಯವಿರುವ ವ್ಯಕ್ತಿಗಳಿಗೆ ಆದಾಯ ತೆರಿಗೆಯಿಂದ ವಿನಾಯಿತಿಯಿದೆ. ಆದರೆ ಮೂಲ ವಿನಾಯಿತಿ ಮಿತಿಯು 2.5ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಳಗೊಂಡಿಲ್ಲ.
ತೆರಿಗೆ ಇಲಾಖೆಯ ಪ್ರಕಾರ, 97ಲಕ್ಷ ತೆರಿಗೆದಾರರು ತಮ್ಮ ಆದಾಯವು 5 ಲಕ್ಷ ರೂಪಾಯಿಗಳಿಂದ 10 ಲಕ್ಷ ರೂಪಾಯಿಗಳವರೆಗೆ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಈ ತೆರಿಗೆದಾರರಿಂದ ಸಂಗ್ರಹಿಸಲಾದ ಆದಾಯವು 45,000 ಕೋಟಿ ರೂಪಾಯಿಗಳಿಗಿಂತಲೂ ಅಧಿಕ. ಇವರಲ್ಲಿ ವೇತನ ಪಡೆಯುವ ವರ್ಗದ ಕೊಡುಗೆ ಅತಿಹೆಚ್ಚು. ಆದ್ದರಿಂದ ಈ ಬಾರಿ ತೆರಿಗೆ ವಿನಾಯತಿಗಿಂತಲೂ ಹೆಚ್ಚಿನದರ ನಿರೀಕ್ಷೆಯಿದೆ. ಸರ್ಕಾರವು ಆದಾಯ ತೆರಿಗೆಗೆ ಕತ್ತರಿ ಹಾಕಿದರೆ ಅದು ಗ್ರಾಹಕರಿಗೆ ಹೆಚ್ಚೆಚ್ಚು ಖರ್ಚು ಮಾಡಲು ಅವಕಾಶ ನೀಡಿ ಆರ್ಥಿಕತೆಯಲ್ಲಿ ಬೇಡಿಕೆ ಹೆಚ್ಚಲು ಅನುವಾಗುತ್ತದೆ. ದುಡಿಮೆಗಾರರಲ್ಲಿ 10ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯ ಇರುವ ವ್ಯಕ್ತಿಗಳಿಗೆ 30%ರ ತುತ್ತತುದಿಯ ಮೂಲ ತೆರಿಗೆ ದರ ವಿಧಿಸಲಾಗುತ್ತದೆ. ಸೀತಾರಾಮನ್ ಅವರು ತುತ್ತತುದಿಯ ದರವು ಅನ್ವಯವಾಗುವ ಆದಾಯ ಮಟ್ಟವನ್ನು ಹೆಚ್ಚಿಸಿದರೆ ಅದು ಗ್ರಾಹಕ ಮಾರುಕಟ್ಟೆಯ ಮೂಡ್ ನ್ನು ಉತ್ತೇಜಿಸಬಲ್ಲದು.
30% ತೆರಿಗೆಯನ್ನು 20 ಲಕ್ಷ ರೂಪಾಯಿಗೂ ಹೆಚ್ಚಿನ ಆದಾಯ ಇರುವ ವ್ಯಕ್ತಿಗಳ ಮೇಲೆ ಹೇರಬೇಕೇ ಹೊರತು ಈಗಿರುವಂತೆ 10 ಲಕ್ಷ ರೂಪಾಯಿ ಆದಾಯದ ವ್ಯಕ್ತಿಗಳ ಮೇಲಲ್ಲ ಎಂದು ನೇರ ತೆರಿಗೆ ಕುರಿತ ಟಾಸ್ಕ್ ಫೋರ್ಸ್ ಸಲಹೆ ನೀಡಿದೆ. ಬೇಕಾದರೆ 10 ರಿಂದ 20 ಲಕ್ಷ ರೂಪಾಯಿಗಳ ಆದಾಯ ಇರುವವರಿಗೆ 20% ತೆರಿಗೆಯ ಹೊಸ ತೆರಿಗೆ ದರವನ್ನು ಅಳವಡಿಸಬಹುದು. 2.5 ಲಕ್ಷದಿಂದ 10 ಲಕ್ಷದ ಆದಾಯ ಇರುವವರಿಗೆ 10% ತೆರಿಗೆ ವಿಧಿಸಬಹುದು. ಈಗ ಚಾಲ್ತಿಯಲ್ಲಿರುವಂತೆ ಸ್ವಯಂ-ನೆಲೆಸಿರುವ ಆಸ್ತಿಯ ಮೇಲಿನ ಹೌಸಿಂಗ್ ಸಾಲದ ( ಐದು ಸಮಾನ ಕಂತುಗಳಲ್ಲಿ ಪಡೆದ ಮನೆ ಕಟ್ಟುವ ಮುಂಚಿನ ಬಡ್ಡಿಯನ್ನು ಸೇರಿದಂತೆ) ಬಡ್ಡಿಯನ್ನು 2 ಲಕ್ಷ ರೂಪಾಯಿಗಳಿಗೆ ಮಿತಿಗೊಳಿಸಲಾಗಿದೆ. ಅಷ್ಟೇ ಅಲ್ಲದೇ 2019-20ರ ಹಣಕಾಸು ವರ್ಷದಲ್ಲಿ ಜಾರಿಗೊಳಿಸಿರುವ ಸೆಕ್ಷನ್ 80 EEA ಯ ಪ್ರಕಾರ 45ಲಕ್ಷ ರೂಪಾಯಿಗಳಿಗೆ ಹೆಚ್ಚಿಲ್ಲದ ಸ್ಟಾಂಪ್ ಡ್ಯೂಟಿ ಇರುವ ಒಂದು ಮನೆಯನ್ನು ಖರೀದಿಸಿದಲ್ಲಿ ಬಡ್ಡಿ ಪಾವತಿಯ ಮೇಲೆ 1.5 ಲಕ್ಷ ರೂಪಾಯಿಗಳ ಹೆಚ್ಚುವರಿ ಕಡಿತವಿರುತ್ತದೆ.
ಆದರೆ ಅನೇಕ ನಗರಗಳಲ್ಲಿ ರಿಯಲ್ ಎಸ್ಟೇಟ್ ಬೆಲೆಗಳು ದುಬಾರಿಯಾಗಿವೆ. ಹೀಗಾಗಿ ಮನೆಯ ಮೌಲ್ಯದ ಮೇಲಿನ ಯಾವುದೇ ಮಿತಿ ಇಲ್ಲದಾಗಬೇಕು. ಎಲ್ಲಾ ತೆರಿಗೆದಾರರಿಗೆ ಅವರು ಕೊಳ್ಳುವ ಮೊದಲ ಮನೆಯ ಮೇಲೆ ಅದರ ಬೆಲೆ ಗಾತ್ರಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆಯೇ ಮತ್ತಷ್ಟು ಹೆಚ್ಚಿನ ಕಡಿತವನ್ನು ವಿಸ್ತರಿಸಬಹುದಾಗಿದೆ. ಇದರಿಂದ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ದೊರೆಯುತ್ತಿತ್ತು. ಕೊಳ್ಳುವವರಿಗೆ ವಿಶಾಲ ಆಯ್ಕೆಗಳನ್ನು ನೀಡಿದಂತಾಗುತ್ತಿತ್ತು. ಅದೇ ರೀತಿಯಲ್ಲಿ ಮನೆ ಬಳಕೆಯ ಉಳಿತಾಯದ ಮೇಲಿನ ಕಡಿತವನ್ನು ಸೆಕ್ಷನ್ 80 C ಅನ್ವಯ ವಾರ್ಷಿಕ ₹1,50,000ಕ್ಕೆ ಮಿತಿಗೊಳಿಸಲಾಗಿದೆ. ಈ ಮಿತಿಯನ್ನು ಸರ್ಕಾರ ಹೆಚ್ಚಿಸಬೇಕು. ಜೀವನ ನಡೆಸುವ ವೆಚ್ಚದಲ್ಲಿ ಏರಿಕೆಯಾಗಿರುವುದರಿಂದ ಇದು ಅನಿವಾರ್ಯವಾಗಿದೆ.
ಮಕ್ಕಳ ಟ್ಯೂಷನ್ ಫೀಜು, ಜೀವವಿಮೆ ಕಂತು ಮತ್ತು ಮನೆ ಸಾಲದ ಅಸಲು ಪಾವತಿ ಮುಂತಾದ ವೆಚ್ಚಗಳಿಗೆ ಪ್ರತ್ಯೇಕ ಕಡಿತಗಳನ್ನು ವಿಧಿಸಬೇಕು. ವ್ಯಕ್ತಿವೋರ್ವ NPSಗೆ ನೀಡುವ ಕೊಡುಗೆಯ ಮೇಲೆ ₹50,000ದ ಹೆಚ್ಚುವರಿ ಕಡಿತ ಘೋಷಿಸಬೇಕು ಎಂಬ ಬೇಡಿಕೆಯೂ ಇದೆ. ಹಾಗೆಯೇ, ಶೇಕಡಾ 10ರಂತೆ 1 ಲಕ್ಷ ರೂಪಾಯಿಗಳಿಗೆ ಮೀರಿದ ಈಕ್ವಿಟಿ ಶೇರುಗಳ ವರ್ಗಾವಣೆಯಿಂದ ಬರುವ ಲಾಭದ ಮೇಲೆ ದೀರ್ಘಕಾಲಿಕ ಹೂಸಿಕೆಯ ತೆರಿಗೆಯನ್ನು ಮರು ಪರಿಶೀಲಿಸಬೇಕು ಎಂಬ ಬೇಡಿಕೆಯೂ ಕೇಳಿಬರುತ್ತಿದೆ. ಬಹಳಷ್ಟು ಜನರು ಅನೇಕ ವರ್ಷಗಳಿಂದ ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಶೇರುಗಳನ್ನು ಹೊಂದಿರುವುದರಿಂದ ₹ 1ಲಕ್ಷದ ಮಿತಿ ಬಹಳ ಕಡಿಮೆಯಾಗಿದೆ.
ದಿನನಿತ್ಯದ ವಸ್ತುಗಳ ಬೆಲೆಗಳು ಹಿಂದೆಂದಿಗಿಂತಲೂ ಹೆಚ್ಚಾಗಿವೆ. ಈ ಅಗತ್ಯ ವಸ್ತುಗಳ ಬೆಲೆಯನ್ನು ಸಾಮಾನ್ಯರಿಗೆ ಎಟುಕುವಂತೆ ಕಡಿಮೆ ಮಾಡುವುದು ಬಹಳ ಮುಖ್ಯವಾಗಿದೆ. ಗ್ರಾಹಕರಲ್ಲಿ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಲು ಮತ್ತು ನೆಲಕಚ್ಚಿರುವ ಬೇಡಿಕೆಯನ್ನು ಹೆಚ್ಚಿಸಲು ಕೆಲವು ಉತ್ಪನ್ನಗಳ ಮೇಲಿನ GSTಯನ್ನು ಸಹ ಕಡಿತಗೊಳಿಸಬಹುದು ಎಂಬ ನಿರೀಕ್ಷೆಯೂ ಇದೆ.