ಹೈದರಾಬಾದ್: 1995 ಆಗಸ್ಟ್ 27 ರಂದು ಆರಂಭಗೊಂಡು ಸುದ್ದಿ, ರಿಯಾಲಿಟಿ ಶೋ ಸೇರಿದಂತೆ ವಿವಿಧ ಪ್ರಮುಖ ಜನಪ್ರಿಯ, ಅರ್ಥಪೂರ್ಣ ಕಾರ್ಯಕ್ರಮಗಳ ರಸದೌತಣವನ್ನು ವೀಕ್ಷಕರಿಗೆ ಉಣಬಡಿಸಿ ಟೆಲಿವಿಷನ್ ಇತಿಹಾಸದಲ್ಲಿ ಹೊಸ ಶಖೆ ಆರಂಭಿಸಿ ಸೈ ಎನಿಸಿಕೊಂಡ ಈಟಿವಿಗೆ ಇಂದು 25ರ ಹರೆಯದ ಸಂಭ್ರಮ, ಸಡಗರ.!
ಈಟಿವಿ ಆರಂಭವಾದಾಗಲೇ ವೀಕ್ಷಕರಿಗೆ ಆರೋಗ್ಯಕರ, ನಿಷ್ಪಕ್ಷಪಾತ, ನಿಖರ ಸುದ್ದಿ ಹಾಗೂ ಮನರಂಜನೆ ನೀಡುವ ಭರವಸೆ ನೀಡಿತ್ತು. ಅದರಂತೆ ಇಂದಿಗೂ ನಡೆದುಕೊಂಡು ಬಂದಿರುವ ಸಂಸ್ಥೆ ಹೊಸ ಹೊಸ ತಂತ್ರಜ್ಞಾನದೊಂದಿಗೆ ಉನ್ನತ ಗುಣಮಟ್ಟದ ಅನೇಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದೆ.
ಈಟಿವಿ ಲೋಕಾರ್ಪಣೆಗೊಂಡ ಬಳಿಕ ಕೇಬಲ್ ಟಿವಿ ಸಂಪರ್ಕ ಹೆಚ್ಚಾಗಿದ್ದು ನಗರ, ಪಟ್ಟಣ, ಹಳ್ಳಿಗಳಲ್ಲೂ ಹೆಚ್ಚು ಪ್ರಾಮುಖ್ಯತೆ, ಜನಪ್ರೀಯತೆ ಪಡೆದುಕೊಂಡಿದೆ. ವ್ಯವಸ್ಥಾಪಕ ನಿರ್ದೇಶಕ ಸುಮನ್ ನೇತೃತ್ವದಲ್ಲಿ ಅದ್ಭುತವಾಗಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಮತ್ತಷ್ಟು ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ಸು ಸಾಧಿಸಿದೆ.
ಪ್ರತಿದಿನ ಸಿನಿಮಾ ನೋಡುವ ಭಾಗ್ಯ
ತೆಲುಗು ಭಾಷೆಯಲ್ಲಿ ಇಪ್ಪತ್ತನಾಲ್ಕು ಗಂಟೆಗಳ ಮೊದಲ ಸುದ್ದಿ ಚಾನೆಲ್ ಆಗಿ ಈಟಿವಿ ಹೊರಹೊಮ್ಮಿದ್ದು, ಅನೇಕ ಹೊಸ ಪ್ರಯೋಗಗಳಿಗೂ ಸಾಕ್ಷಿಯಾಗಿದೆ. ಚಲನಚಿತ್ರ ಗೀತೆಗಳನ್ನು ವೀಕ್ಷಣೆ ಮಾಡಲು ಇಡೀ ವಾರ ಕಾಯುತ್ತಿದ್ದ ಜನರಿಗೆ ಪ್ರತಿದಿನ ಸಿನಿಮಾ ನೋಡುವ ಭಾಗ್ಯವನ್ನೂ ಕರುಣಿಸಿತು. ಸಂಗೀತಪ್ರೀಯರಿಗೆ ರಿಯಾಲಿಟಿ ಶೋ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನೇತೃತ್ವದಲ್ಲಿ ಮೊಟ್ಟ ಮೊದಲ ಬಾರಿಗೆ ' ಪಾಡುತಾ ತೀಯಗ' ಕಾರ್ಯಕ್ರಮ ಪ್ರಾರಂಭಿಸಿ, ಸಂಗೀತ ಅಭಿಮಾನಿಗಳ ಮನಗೆದ್ದಿತ್ತು.
ಪ್ರಸಿದ್ಧ ವ್ಯಕ್ತಿಗಳು ಹಾಗೂ ಬಲವಾದ ಸರಣಿ ಕಥಾಹಂದರದ ಮೂಲಕ ಈಟಿವಿಯಲ್ಲಿ ಮೂಡಿ ಬಂದ ಪದ್ಮವ್ಯೂಹಂ, ಶಾಂತಿ ನಿವಾಸಂ, ಅಂಥಾಪುರಂ, ಅತ್ತಾರಿಂಟಿಕಿ ದಾರೆದಿ , ಸೀತಮ್ಮ ವಾಕಿಟ್ಲೊ ಸಿರಿಮಲ್ಲೆ ಚೆಟ್ಟು ಟಿವಿ ಕಾರ್ಯಕ್ರಮಗಳು ಈಟಿವಿಯ ಮೆರುಗು ಹೆಚ್ಚಿಸಿದವು.
ವಿವಿಧ ಕಾರ್ಯಕ್ರಮಗಳ ಪ್ರಸಾರ
ಇದರ ಹೊರತಾಗಿ ಮಕ್ಕಳಿಗಾಗಿ ರಸಪ್ರಶ್ನೆ ಕಾರ್ಯಕ್ರಮ, ಯುವಜನರಿಗೆ ಆಟದ ಪ್ರದರ್ಶನ, ವಿವಾಹಿತರಿಗೆ ಮೋಜಿನ ಚಟುವಟಿಕೆಗಳು.. ಹೀಗೆ ಇವೆಲ್ಲವೂ ಈಟಿವಿಯಲ್ಲಿ ಮೂಡಿ ಬಂದಿರುವ ಮನರಂಜನಾತ್ಮಕ ವಿಶಿಷ್ಠ ಕಾರ್ಯಕ್ರಮಗಳ ಕೆಲವು ಹೆಸರುಗಳಷ್ಟೇ. ಈಟಿವಿಯಲ್ಲಿ ಬೆಳಗ್ಗೆ ಮೂಡಿಬರುವ 'ಅನ್ನದಾತ' ವಿಶೇಷ ಸರಣಿ ಕಾರ್ಯಕ್ರಮ ಮಹತ್ವದ ಮಾಹಿತಿ ಒದಗಿಸಿದ್ದು, ರೈತರಿಗೆ ಅಮೂಲ್ಯವಾದ ವಿಷಯ ಸಂಗ್ರಹಿಸಲು ಸಾಧ್ಯವಾಗಿದೆ.
ಇದನ್ನೂ ಓದಿ: ಈಟಿವಿಗೆ ರಜತ ಮಹೋತ್ಸವದ ಸಂಭ್ರಮ...ಶುಭ ಕೋರಿದ ಟಾಲಿವುಡ್ ಗಣ್ಯರು
ಈ ಎಲ್ಲಾ ವಿವಿಧ ಕಾರ್ಯಕ್ರಮಗಳ ಹೊರತಾಗಿಯೂ ಈಟಿವಿ ನ್ಯೂಸ್ ತೆಲುಗು ಜನರ ಹೃದಯ ಬಡಿತ ಮಾರ್ಪಾಡು ಮಾಡಿದೆ. ಎಲ್ಲ ಪ್ರಮುಖ ಘಟನೆಗಳ ನಿಷ್ಪಕ್ಷಪಾತ, ಪ್ರಾಮಾಣಿಕ ವಿಶ್ಲೇಷಣೆ ಜತೆಗೆ ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ ಸಾರವನ್ನು ತ್ವರಿತವಾಗಿ ನೀಡುವಲ್ಲಿ ಈಟಿವಿ ಯಶಸ್ವಿಯಾಗಿದೆ.
ಈಟಿವಿಯಲ್ಲಿ ಸ್ಟಾರ್ ನಟರು ನಡೆಸಿಕೊಟ್ಟ ವಿವಿಧ ಕಾರ್ಯಕ್ರಮಗಳು
ಜಯಸುಧಾ, ರೋಜಾ, ಅಲಿ, ಬಾಲಚಂದ್ರ, ರಾಜಮೌಳಿ, ಕ್ರಿಶ್, ಪ್ರಭುದೇವ್, ಶಂಕರ್ ಮಹಾದೇವನ್, ಅನುಸೂಯಾ, ರಶ್ಮಿ, ಪ್ರದೀಪ್ ಮುಂತಾದವರು ಈಟಿವಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.
ಮಕ್ಕಳಿಗಾಗಿಯೇ ಹೊಸ ಚಾನೆಲ್
ಮಕ್ಕಳಿಗೋಸ್ಕರ ಈಟಿವಿ ಬಾಲಭಾರತ್ ಚಾನಲ್ ಆರಂಭಿಸುವ ಕಾರ್ಯವೂ ಭರದಿಂದ ಸಾಗಿದೆ. ಇಂಗ್ಲಿಷ್ ಸೇರಿದಂತೆ ದೇಶದ ಹನ್ನೊಂದು ಪ್ರಾದೇಶಿಕ ಭಾಷೆಗಳಲ್ಲಿ ಮಕ್ಕಳಿಗೆ ಮಾಹಿತಿ ನೀಡುವ ಚಾನೆಲ್ ಇದಾಗಿದೆ.
ಪ್ರಸ್ತುತ ಈಟಿವಿ ನೆಟ್ವರ್ಕ್ ಪ್ರತಿದಿನ 7 ಕೋಟಿ ವೀಕ್ಷಕರನ್ನು ತಲುಪುತ್ತಿದ್ದು, ಪ್ರತಿ ಕ್ಷಣದಲ್ಲೂ ಸುಮಾರು 1.5 ಕೋಟಿ ಜನರು ಚಾನೆಲ್ ವೀಕ್ಷಣೆ ಮಾಡುತ್ತಿರುತ್ತಾರೆ. ಜನವರಿ 18, 2000ರಂದು ಈಟಿವಿ ತನ್ನದೇ ಉಪಗ್ರಹ ಹೊಂದಿರುವ ಮೊದಲ ಖಾಸಗಿ ಚಾನೆಲ್ ಆಗಿ ಹೊರಹೊಮ್ಮಿದೆ. ಇದಲ್ಲದೆ 1995ರ ಅಕ್ಟೋಬರ್ನಲ್ಲಿ ತಿರುಮಲದಲ್ಲಿ ನಡೆದ ವೆಂಕಟೇಶ್ವರ ಬ್ರಹ್ಮೋತ್ಸವ ಕಾರ್ಯಕ್ರಮದ ನೇರ ಪ್ರಸಾರ ಮಾಡುವ ಮೂಲಕ ಈಟಿವಿ ತೆಲುಗು ಜನರಿಗೆ ಸಾಧ್ಯವಾದಷ್ಟು ಆಧ್ಯಾತ್ಮಿಕ ಅನುಭವ ನೀಡಿದೆ.
ಈಟಿವಿ ಚಾನೆಲ್ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿಯೂ ಅದ್ಭುತ ಯಶಸ್ಸು ಸಾಧಿಸಿದ್ದು, ಯೂಟ್ಯೂಬ್ನಲ್ಲಿ 3.6 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿದೆ.
ಪ್ರೋತ್ಸಾಹಿಸಿ, ಬೆಳೆಸಿದವರಿಗೆ ರಾಮೋಜಿರಾವ್ ಧನ್ಯವಾದ
ಈಟಿವಿ 25 ಸಾರ್ಥಕ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಸಂಭ್ರಮದಲ್ಲಿ ಈಟಿವಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್ ವೀಕ್ಷಕರಿಗೆ ಅಭಿನಂದನೆ ಸಲ್ಲಿಸಿದರು.
'ಎಲ್ಲರಿಗೂ ನಮಸ್ಕಾರ. ಇಂದು ಈಟಿವಿ 25 ವರ್ಷಗಳನ್ನು ಪೂರೈಸಿದೆ. ಪ್ರಸಾರ ಪ್ರಾರಂಭವಾದ ದಿನದಿಂದಲೇ ತೆಲುಗು ವೀಕ್ಷಕರು ಈ ಚಾನೆಲ್ಗೆ ಹೆಚ್ಚು ಪ್ರೋತ್ಸಾಹ ನೀಡಿದ್ದಾರೆ. ನಿಮ್ಮ ಪ್ರೋತ್ಸಾಹ, ಆಶೀರ್ವಾದ ಬಹಳ ಅಮೂಲ್ಯವಾಗಿದ್ದು, ಪ್ರತಿಯೊಬ್ಬರಿಗೂ ನಾನು ಧನ್ಯವಾದ ಸಲ್ಲಿಸುವೆ ಎಂದಿದ್ದಾರೆ. ಈಗ ಹುಟ್ಟಿದ ಮಗು ನಮ್ಮ ಕಣ್ಮುಂದೆ ಬೆಳೆದಾಗ ಆ ಸಂತೋಷ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. 25 ವರ್ಷಗಳ ಪುಟ ತಿರುವಿ ನೋಡಿದಾಗ ಸುದ್ದಿ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ನಾವು ದಾಟಿದ ಮೈಲಿಗಲ್ಲುಗಳು, ಎದುರಿಸಿದ ಸವಾಲುಗಳು ನಮ್ಮ ಮುಂದೆ ಬರುತ್ತವೆ' ಎಂದಿದ್ದಾರೆ.
ಈಟಿವಿಯಲ್ಲಿ ಉತ್ತಮ ಮತ್ತು ಆರೋಗ್ಯಕರ ಕಾರ್ಯಕ್ರಮಗಳೇ ಪ್ರಸಾರವಾಗಲಿದೆ ಎಂದು ನಾನು ಪ್ರಾರಂಭದ ದಿನವೇ ಹೇಳಿದ್ದೆ. ಆ ಮಾತನ್ನು ಉಳಿಸಿಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಅಸಂಖ್ಯಾತ ನಟರು, ಬರಹಗಾರರು, ನಿರ್ಮಾಪಕರು, ನಿರ್ದೇಶಕರು, ತಾಂತ್ರಿಕ ತಜ್ಞರು, ಕೇಬಲ್ ಆಪರೇಟರ್‌ಗಳು ಮತ್ತು ಜಾಹೀರಾತುದಾರರ ಅವಿರತ ಪ್ರಯತ್ನವೇ ಬೆಳ್ಳಿ ಮಹೋತ್ಸವಕ್ಕೆ ಕಾರಣ ಎಂದಿದ್ದಾರೆ. ಈಟಿವಿ ಕುಟುಂಬದ ಎಲ್ಲ ಸದಸ್ಯರಿಗೂ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಸಾಟಿಯಿಲ್ಲದ ಮನರಂಜನೆ ಮುಂದುವರೆಯಲಿದೆ ಎಂಬ ಭರವಸೆಯನ್ನು ಅವರು ಇದೇ ಸಂದರ್ಭ ನೀಡಿದ್ದಾರೆ.
ಈಟಿವಿ 25 ವರ್ಷ ಪೂರೈಸಿರುವ ಈ ಸಂಭ್ರಮದಲ್ಲಿ ಅನೇಕ ನಟರು, ರಾಜಕೀಯ ಮುಖಂಡರು ಸೇರಿದಂತೆ ಗಣ್ಯಾತಿಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.