ನ್ಯೂಯಾರ್ಕ್: ರಾಷ್ಟ್ರಗಳು ತಮ್ಮ ಸಾಲಗಳನ್ನು ಪುನರ್ ಹೊಂದಾಣಿಕೆ ಮಾಡಬೇಕಿದ್ದು, ಕೋವಿಡ್-10 ಸಂಕಷ್ಟದಿಂದ ಕೂಡಲೇ ಪಾರಾಗಲು ಕದನ ವಿರಾಮ, ನಿರ್ಬಂಧಗಳ ತೆರವು, ಶೇ.10 ರಷ್ಟು ಜಾಗತಿಕ ಜಿಡಿಪಿ ಹಾಗೂ ಕೋವಿಡ್-19 ವ್ಯಾಕ್ಸಿನ್ ಅಭಿವೃದ್ಧಿಪಡಿಸುವುದು ಎಲ್ಲ ರಾಷ್ಟ್ರಗಳ ಏಕೈಕ ಗುರಿಯಾಗಬೇಕಿದೆ ಎಂದು ವಿಶ್ವಸಂಸ್ಥೆಯ ಡೆಪ್ಯೂಟಿ ಸೆಕ್ರೆಟರಿ ಜನರಲ್ ಅಮಿನಾ ಮೊಹಮ್ಮದ್ ಹೇಳಿದ್ದಾರೆ.
ಸುಸ್ಥಿರ ಅಭಿವೃದ್ಧಿ ಗುರಿಗಾಗಿ ರಚಿಸಲಾಗಿರುವ ಹಣಕಾಸು ಸ್ನೇಹಿತರ ಗುಂಪಿನ ರಾಷ್ಟ್ರಗಳ ವರ್ಚ್ಯುವಲ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಷ್ಟ್ರಗಳು ತಮ್ಮ ಸಾಲಗಳ ಪುನಾರಚನೆ ಮಾಡಬೇಕಿದೆ. 2020ರ ಸಾಲಿನಲ್ಲಿ ಸಾಲಗಳ ಮೇಲಿನ ಬಡ್ಡಿಯನ್ನು ತಕ್ಷಣ ಮನ್ನಾ ಮಾಡುವ ಮೂಲಕ ರಾಷ್ಟ್ರಗಳು ಕೋವಿಡ್-19 ಸಂಕಷ್ಟದಿಂದ ತಕ್ಷಣ ಚೇತರಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕಿದೆ ಎಂದು ಅಮಿನಾ ಮೊಹಮ್ಮದ್ ತಿಳಿಸಿದರು.
ಕೋವಿಡ್-19 ವಿರುದ್ಧದ ಹೋರಾಟದಲ್ಲಿ ವಿಶ್ವಾದ್ಯಂತ ಆರೋಗ್ಯ ಕಾರ್ಯಕರ್ತರ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ. ಬಿಕ್ಕಟ್ಟಿನಲ್ಲಿರುವ 40 ರಾಷ್ಟ್ರಗಳಿಗೆ 2 ಬಿಲಿಯನ್ ಡಾಲರ್ ನೆರವನ್ನು ಈಗಾಗಲೇ ಘೋಷಿಸಲಾಗಿದೆ. ಬರುವ ದಿನಗಳಲ್ಲಿ ಮತ್ತಷ್ಟು ರಾಷ್ಟ್ರಗಳಿಗೆ ಸಹಾಯಧನ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.