ನವದೆಹಲಿ : ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಎಲ್ಲಾ 32 ಆರೋಪಿಗಳನ್ನು ಲಖನೌ ಸಿಬಿಐ ವಿಶೇಷ ನ್ಯಾಯಾಲಯ ದೋಷ ಮುಕ್ತರನ್ನಾಗಿ ಮಾಡಿ ಐತಿಹಾಸಿಕ ತೀರ್ಪು ನೀಡಿದೆ. ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿರುವ ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕ ಡಿ ರಾಜಾ, ಅಪರಾಧ ತನಿಖಾ ದಳ ಸೇರಿ ವಿವಿಧ ಸಂಸ್ಥೆಗಳ ಕಾರ್ಯನಿರ್ವಹಣೆ ಬಗ್ಗೆ ಪ್ರಶ್ನೆ ಎತ್ತುವಂತಹ ಆದೇಶವನ್ನು ಸಿಬಿಐ ಕೋರ್ಟ್ ನೀಡಿದೆ ಎಂದು ಹೇಳಿದ್ದಾರೆ.
ಕೋರ್ಟ್ ನೀಡಿರುವ ತೀರ್ಪು ನನಗೆ ದೊಡ್ಡ ಆಘಾತ ನೀಡಿದೆ. ಇಂದು ಬಂದಿರುವ ಈ ತೀರ್ಪು ಸಂವಿಧಾನ ಹಾಗೂ ಸರ್ಕಾರಿ ಸಂಸ್ಥೆಗಳ ದೊಡ್ಡದಾಗಿ ಪ್ರಶ್ನಿಸುವಂತೆ ಮಾಡಿದೆ ಎಂದಿದ್ದಾರೆ. ಇಂತಹ ತೀರ್ಪುಗಳನ್ನು ಜನ ಎಂದೂ ನಿರೀಕ್ಷಿಸಿರಲಿಲ್ಲ. ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿರುವುದು ಸತ್ಯ.
ಇದನ್ನು ಸಾರ್ವಜನಿಕರ ಮುಂದೆ ಇಡಬೇಕು. ಎಲ್ಲಾದಕ್ಕೂ ಸಾಕ್ಷಿಗಳಿವೆ. ಆದರೆ, ಆರೋಪಿಗಳು ದೋಷ ಮುಕ್ತರಾಗಿದ್ದಾರೆ. ಹಾಗಾದರೆ, ಈ ಧ್ವಂಸ ಮಾಡಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ. ಪ್ರಕರಣ ಸಂಬಂಧ ಯಾವುದೇ ಬಲವಾದ ಸಾಕ್ಷಿಗಳು ಇಲ್ಲ ಎಂದು ಸಿಬಿಐ ಹೇಳಿದೆ.
ಹಾಗಾದರೆ, ಸಿಬಿಐ ತನಿಖಾ ದಕ್ಷತೆ ಏನು?. ಕೋರ್ಟ್ ಹಿಂದೆ ನೀಡಿದ್ದ ಆದೇಶದಲ್ಲಿ ಮಸೀದಿಯನ್ನು ಧ್ವಂಸ ಮಾಡಿರುವುದು ಕಾನೂನು ಬಾಹಿರ ಮತ್ತು ಅಪರಾಧ ಅಂತಾ ಆದೇಶ ನೀಡಿತ್ತು. ಆದರೆ, ಸಿಬಿಐ ವಿಶೇಷ ಕೋರ್ಟ್ 32 ಆರೋಪಿಗಳನ್ನು ದೋಷಮುಕ್ತಗೊಳಿಸಿ 28 ವರ್ಷಗಳ ಹಳೆಯ ಪ್ರಕರಣಕ್ಕೆ ಇತಿಶ್ರೀ ಹೇಳಿದೆ ಎಂದಿದ್ದಾರೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಡಿ ರಾಜಾ, ಇದು ಬಲಪಂಥೀಯ ಸರ್ಕಾರವಾಗಿದೆ ಎಂದು ಕಿಡಿಕಾರಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳಾದ ಮಾಜಿ ಪ್ರಧಾನಿ ಎಲ್‌ಕೆ ಅಡ್ವಾಣಿ, ಮಾಜಿ ಕೇಂದ್ರ ಸಚಿವ ಮುರಳಿ ಮನೋಹರ್ ಜೋಶಿ, ಉಮಾ ಭಾರತಿ, ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ದೋಷ ಮುಕ್ತರಾದವರಲ್ಲಿ ಪ್ರಮುಖರು.