ಮುಂಬೈ: ಸಿಬಿಐ ತನಿಖೆಗೆ ರಾಜ್ಯ ಸರ್ಕಾರದ ಅನುಮತಿ ಕಡ್ಡಾಯ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸ್ವಾಗತಿಸಿರುವ ಮಹಾರಾಷ್ಟ್ರ ಸಚಿವ ಅಸ್ಲಾಂ ಶೇಕ್ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಕೇಂದ್ರ ಬಿಜೆಪಿ ಸರ್ಕಾರದ ಅಡಿ ಸಿಬಿಐ ‘ಪಾನ್ ಶಾಪ್’ ನಂತೆ ಕೆಲಸ ಮಾಡುತ್ತಿದೆ ಎಂದು ಅಸ್ಲಾಂ ಶೇಕ್ ಆರೋಪಿಸಿದರು.
ಬಿಜೆಪಿ ಸರ್ಕಾರದ ಅಡಿ ಕಾರ್ಯ ನಿರ್ವಹಿಸುತ್ತಿರುವ ಸಿಬಿಐ ‘ಪಾನ್ ಪಟ್ಟಿ ಕಿ ದುಕಾನ್’ (ಪಾನ್ ಶಾಪ್) ನಂತೆ ಕೆಲಸ ಮಾಡುತ್ತಿದೆ ಎಂದು ಅಸ್ಲಾಂ ಶೇಕ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು. ಬಿಜೆಪಿಯೇತರ ಸರ್ಕಾರ ಇರುವ ರಾಜ್ಯಗಳ ಮುಖ್ಯಮಂತ್ರಿಗಳ ಮತ್ತು ಸಚಿವರುಗಳ ವಿರುದ್ಧ ಕೇಸ್ ದಾಖಲಿಸಲಾಗುತ್ತಿದೆ ಎಂದು ಶೇಕ್ ಆರೋಪ ಮಾಡಿದರು.
ರಾಜ್ಯ ಸರ್ಕಾರಗಳ ಅನುಮತಿ ಪಡೆಯದೇ ಸಿಬಿಐ ತನಿಖೆ ನಡೆಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ತಿಳಿಸಿದೆ.
ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ರಾಜ್ಯ ಸರ್ಕಾರದ ಒಪ್ಪಿಗೆ ಕಡ್ಡಾಯವಾಗಿದೆ ಮತ್ತು ಕೇಂದ್ರ ಸರ್ಕಾರವು ರಾಜ್ಯಗಳ ಅನುಮತಿಯಿಲ್ಲದೇ ಯಾವುದೆ ರಾಜ್ಯಕ್ಕೆ ಏಜೆನ್ಸಿಯ ವ್ಯಾಪ್ತಿಯನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು.
ಉತ್ತರಪ್ರದೇಶದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದ ಆರೋಪಿಗಳ ಅರ್ಜಿಗಳನ್ನು ನಿರ್ಧರಿಸುವಾಗ, ನ್ಯಾಯಮೂರ್ತಿ ಎ.ಎಂ ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠವು ರಾಜ್ಯಗಳ ಅನುಮತಿಯಿಲ್ಲದೇ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದರು.