ಬೆಂಗಳೂರು: ಐಎಂಎ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ಸಿಬಿಐ ವಿಚಾರಣೆಗೆ ಒಳಪಡಿಸಲು ಅನುಮತಿ ಪಡೆದುಕೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಾಜ್ಯ ಸರ್ಕಾರ ಐಎಂಎ ತನಿಖೆಯನ್ನು ಸಿಬಿಐಗೆ ಒಪ್ಪಿಸಿದ ನಂತರ ವಿಚಾರಣೆ ತೀವ್ರವಾಗುತ್ತಿದೆ.
ರಾಜ್ಯ ಸರ್ಕಾರಕ್ಕೆ 2019ರ ಡಿಸೆಂಬರ್ನಲ್ಲಿ ಸಿಬಿಐ ಬರೆದ ಪತ್ರದ ಪ್ರಕಾರ ಆರ್ಥಿಕ ಅಪರಾಧಗಳ ದಳದ ಮಾಜಿ ಐಜಿಪಿಯಾಗಿದ್ದ ಹೇಮಂತ್ ನಿಂಬಾಳ್ಕರ್ ಹಾಗೂ ಮಾಜಿ ಡೆಪ್ಯುಟಿ ಕಮೀಷನರ್ ಆಫ್ ಪೊಲೀಸ್ (ಪೂರ್ವ ವಿಭಾಗ) ಅಜಯ್ ಹಿಲೋರಿ ಅವರು ಐಎಂಎ ಮುಖ್ಯಸ್ಥ ಹಾಗೂ ಹಗರಣದ ಕಿಂಗ್ ಪಿನ್ ಮನ್ಸೂರ್ ಅಲಿಖಾನ್ನೊಡನೆ ಸಂಪರ್ಕವಿದೆ ಎಂದು ಹೇಳಲಾಗಿತ್ತು.
ಒಂದು ತಿಂಗಳ ನಂತರ ಅಂದರೆ ಜನವರಿ 7 2020ರಂದು ಸಿಎಂ ಬಿಎಸ್ವೈಗೆ ಪತ್ರ ಬರೆದಿದ್ದ ಸಿಬಿಐ ಈ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ಕೋರಿತ್ತು. ಈ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿಬಿಐಗೆ ವಿಚಾರಣೆ ಮಾಡಬಹುದೆಂದು ಪತ್ರದಲ್ಲಿ ಸ್ಪಷ್ಟನೆ ನೀಡಿದ್ದರು.
ಕಳೆದ ಆಗಸ್ಟ್ ತಿಂಗಳಲ್ಲೇ ಈ ಪ್ರಕರಣ ಕುರಿತಂತೆ ಸಿಬಿಐ ಚಾರ್ಚ್ ಶೀಟ್ ತಯಾರಿಸಿತ್ತು. ಆದರೆ, ರಾಜ್ಯ ಸರ್ಕಾರದ ಒಪ್ಪಿಗೆಯಿಲ್ಲದ ಕಾರಣಕ್ಕೆ ಈ ಇಬ್ಬರು ಐಪಿಎಸ್ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ಆ ಚಾರ್ಜ್ ಶೀಟ್ನಲ್ಲಿ ಮನ್ಸೂರ್ ಅಲಿಖಾನ್ ಹಾಗೂ ಐಎಂಎನ ಏಳು ಮಂದಿ ನಿರ್ದೇಶಕರು, ಐದು ಮಂದಿ ಸದಸ್ಯರು, ಒಬ್ಬ ಆಡಿಟರ್, ಒಬ್ಬ ಖಾಸಗಿ ವ್ಯಕ್ತಿ ಹಾಗೂ ಐದು ಖಾಸಗಿ ಕಂಪನಿಗಳು ಸೇರಿದಂತೆ 19 ಮಂದಿ ವಿರುದ್ಧ ಚಾರ್ಚ್ ಶೀಟ್ ಫೈಲ್ ಮಾಡಿತ್ತು. ಇವರೆಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿತ್ತು.
ಹೇಮಂತ್ ನಿಂಬಾಳ್ಕರ್ ಆರ್ಥಿಕ ಅಪರಾಧಗಳ ವಿಭಾಗದಲ್ಲಿದ್ದಾಗ ಅಜಯ್ ಹಿಲೋರಿಯ ತನಿಖಾ ತಂಡ ಐಎಂಎ ಪ್ರಕರಣದಲ್ಲಿ ಮನ್ಸೂರ್ ಅಲಿಖಾನ್ಗೆ ಕ್ಲೀನ್ ಚಿಟ್ ನೀಡಿದ್ದನ್ನು ಸಿಬಿಐ ಇಲ್ಲಿ ಉಲ್ಲೇಖಿಸಿದೆ ಎನ್ನಲಾಗಿದೆ.