ನವದೆಹಲಿ : ಜಿವಿಕೆ ಸಮೂಹ ಸಂಸ್ಥೆಗಳ ಅಧ್ಯಕ್ಷ ವೆಂಕಟ ಕೃಷ್ಣ ರೆಡ್ಡಿ ಗುಣಪತಿ ಹಾಗೂ ಅವರ ಪುತ್ರ ಮತ್ತು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ವ್ಯವಸ್ಥಾಪಕ ನಿರ್ದೇಶಕ ಜಿ.ವಿ.ಸಂಜಯ್ ರೆಡ್ಡಿ ಮತ್ತು ಇತರರ ವಿರುದ್ಧ 705 ಕೋಟಿ ರೂ. ಅವ್ಯವಹಾರದ ಆರೋಪದ ಮೇಲೆ ಸಿಬಿಐ ಪ್ರಕರಣ ದಾಖಲಿಸಿದೆ.
ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಎಂಐಎಎಲ್)ದ ನಿರ್ವಹಣೆ ಮತ್ತು ಉನ್ನತೀಕರಣಕ್ಕಾಗಿ 4 ಏಪ್ರಿಲ್ 2006 ರಂದು ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (ಎಎಐ) ಸಾರ್ವಜನಿಕ - ಖಾಸಗಿ ಸಹಭಾಗಿತ್ವದ ಸಂಸ್ಥೆಯಡಿ ಜಿವಿಕೆ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ಜೊತೆ ಜಂಟಿ ಉದ್ಯಮವನ್ನು ರೂಪಿಸಿತ್ತು.
ಆ ಬಳಿಕ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡ ಜಿವಿಕೆ ಸಂಸ್ಥೆ, ತಮ್ಮ ಪ್ರವರ್ತಕರು, ಕಾರ್ಯನಿರ್ವಾಹಕರು ಮತ್ತು ಎಎಐ ಜೊತೆ ಸಂಬಂಧವಿಲ್ಲದ ವ್ಯಕ್ತಿಗಳೊಂದಿಗೆ ಸೇರಿಕೊಂಡು ವಿವಿಧ ಮಾರ್ಗಗಳ ಮೂಲಕ ಎಂಐಎಎಲ್ನ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
2017-18 ರಲ್ಲಿ ಒಂಬತ್ತು ಕಂಪನಿಗಳ ಜೊತೆ ಕೆಲಸದ ಒಪ್ಪಂದ ಮಾಡಿಕೊಂಡಿರುವುದಾಗಿ ನಕಲಿ ದಾಖಲೆ ತೋರಿಸಿ ಜಿವಿಕೆ ಸಂಸ್ಥೆ ಎಂಐಎಎಲ್ನ 310 ಕೋಟಿ ರೂ. ನಷ್ಟಕ್ಕೆ ಕಾರಣರಾಗಿದ್ದಾರೆ. ಅಲ್ಲದೇ ಜಿವಿಕೆ ಸಮೂಹದ ಪ್ರವರ್ತಕರು ತಮ್ಮ ಗುಂಪು ಕಂಪನಿಗಳಿಗೆ ಹಣಕಾಸು ಒದಗಿಸಲು ಎಂಐಎಎಲ್ನ 395 ಕೋಟಿ ರೂ. ಮೀಸಲು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ಅಲ್ಲದೇ, ತಮ್ಮ ಪ್ರಧಾನ ಕಚೇರಿಯ ಉದ್ಯೋಗಿಗಳು ಮತ್ತು ಎಂಐಎಎಲ್ ಜೊತೆ ಸಂಬಂಧವಿಲ್ಲದ ಕಂಪನಿಗಳಿಗೆ ಹಣ ಪಾವತಿಸುವ ಮೂಲಕ ಜಿವಿಕೆ ಎಎಐನ ಆದಾಯ ನಷ್ಟಕ್ಕೆ ಕಾರಣವಾಗಿದೆ. ಹಾಗೂ ತಮ್ಮ ವೈಯುಕ್ತಿಕ ಮತ್ತು ಕುಟುಂಬದ ಖರ್ಚು ವೆಚ್ಚಗಳನ್ನು ಪೂರೈಸುವ ಮೂಲಕ ಎಎಐನ ಆದಾಯವನ್ನು ಕಡಿಮೆ ತೋರಿಸಿದ್ದಾರೆ ಎಂದು ಸಿಬಿಐ ಹೇಳಿದೆ.
ಜಿವಿಕೆ ಸಮೂಹದ ಅಧ್ಯಕ್ಷ ಹಾಗೂ ಅವರ ಮಗ ಎಂಐಎಎಲ್ನ ಎಂಡಿ ಜಿ.ವಿ.ಸಂಜಯ್ ರೆಡ್ಡಿ, ಒಂಬತ್ತು ಇತರ ಕಂಪನಿಗಳು ಮತ್ತು ಕೆಲವೊಂದು ಅನಧಿಕೃತ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ಎಎಐ ತಿಳಿಸಿದೆ.