ನವದೆಹಲಿ: ಮಂಗಳವಾರ ನಡೆದ ಐದನೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಸಭೆಯಲ್ಲಿ ಮೇಕೆದಾಟು ಕಿರು ಅಣೆಕಟ್ಟು ಯೋಜನೆಗೆ ಅನುಮೋದನೆ ಪಡೆಯುವ ಕರ್ನಾಟಕದ ಪ್ರಯತ್ನಕ್ಕೆ ತಮಿಳುನಾಡು ಮತ್ತು ಪುದುಚೇರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಪುದುಚೇರಿ ಮತ್ತು ತಮಿಳುನಾಡಿನ ತೀವ್ರ ಆಕ್ಷೆಪದ ಹಿನ್ನೆಲೆಯಲ್ಲಿ ಕರ್ನಾಟಕದ ಅರ್ಜಿ ಕುರಿತ ಚರ್ಚೆಯನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕೈಬಿಟ್ಟಿದೆ.
ಎಂದಿಗೂ ಅಣೆಕಟ್ಟು ನಿರ್ಮಿಸಬಾರದು ಎಂದು ತಮಿಳುನಾಡು ಸತತವಾಗಿ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಅಲ್ಲದೆ ಈ ಸಂಬಂಧ ಎರಡು ಪ್ರಕರಣಗಳು ಸುಪ್ರೀಂಕೋರ್ಟ್ ಮುಂದೆ ಬಾಕಿ ಉಳಿದಿವೆ ಎಂದು ತಮಿಳುನಾಡು ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ಮಣಿವಾಸನ್ ಸಭೆಯ ನಂತರ ತಿಳಿಸಿದ್ದಾರೆ.
'ನಮ್ಮ ಮುಖ್ಯಮಂತ್ರಿಯವರ ನಿರ್ದೇಶನದಂತೆ, ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಪ್ರಸ್ತಾಪವನ್ನು ನಾವು ಬಲವಾಗಿ ವಿರೋಧಿಸಿದ್ದೇವೆ. ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣಗಳು ಬಾಕಿ ಇರುವುದರಂದ ಈ ಪ್ರಸ್ತಾಪವನ್ನು ಚರ್ಚಿಸಬಾರದು ಎಂದು ಸಭೆಗೆ ತಿಳಿಸಿದ್ದೇವೆ' ಎಂದಿದ್ದಾರೆ.
ಕರ್ನಾಟಕದ ಯೋಜನೆಯ ಪ್ರಸ್ತಾಪವನ್ನು ಆಕ್ಷೇಪಿಸಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಕೆಳಮಟ್ಟದ ರಾಜ್ಯದ ಒಪ್ಪಿಗೆಯಿಲ್ಲದೆ ಅಂತರ ರಾಜ್ಯ ನದಿಯಲ್ಲಿ ಜಲಾಶಯವನ್ನು ನಿರ್ಮಿಸುವ ಹಕ್ಕು ಇಲ್ಲ ಎಂದು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರಿಗೆ ಪತ್ರ ಬರೆದಿದ್ದರು. ಅಲ್ಲದೆ ತಮಿಳುನಾಡು ಸರ್ಕಾರ, ಈ ಪ್ರಸ್ತಾಪದ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಿದೆ.