ನವದೆಹಲಿ: ಚೀನಾದ ಮೂರು ಕಂಪನಿಗಳೊಂದಿಗೆ ಮಾಡಿಕೊಂಡ ಒಪ್ಪಂದವನ್ನು ತಕ್ಷಣ ರದ್ದುಗೊಳಿಸುವ ನಿರ್ಧಾರವನ್ನು ಕೈಗೊಳ್ಳುವಂತೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟವು (CAIT) ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಒತ್ತಾಯಿಸಿದೆ.
ಚುನಾಯಿತ ಸರ್ಕಾರಗಳು ರಾಷ್ಟ್ರೀಯ ಭಾವನೆಗಳಿಗಾಗಿ ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ಹೇಳಿರುವ ಸಿಎಐಟಿ, ರಾಷ್ಟ್ರದ ಪ್ರಸ್ತುತ ಮನಸ್ಥಿತಿಯನ್ನು ಅರ್ಥೈಸಿಕೊಳ್ಳಬೇಕು. ತಕ್ಷಣ ತಮ್ಮ ನಿರ್ಧಾರವನ್ನು ಬದಲಿಸಿಕೊಳ್ಳುವಂತೆ ಮನವಿ ಮಾಡಿದೆ.
ಚೀನಾದ ಈ ಮೂರು ಸಂಸ್ಥೆಗಳು ಮಹಾರಾಷ್ಟ್ರದಲ್ಲಿ ಸುಮಾರು 5 ಸಾವಿರ ಕೋಟಿ ರೂ ಹೂಡಿಕೆ ಮಾಡುವ ಕುರಿತು ಒಪ್ಪಂದಕ್ಕೆ ಸಹಿ ಹಾಕಿವೆ ಎನ್ನಲಾಗಿದೆ. ಹೆಂಗ್ಲಿ ಎಂಜಿನಿಯರಿಂಗ್, ಫೋಟಾನ್ ಮತ್ತು ಗ್ರೇಟ್ ವಾಲ್ ಮೋಟಾರ್ಸ್, ಪಿಎಂಐ ಎಲೆಕ್ಟ್ರೋ ಮೊಬಿಲಿಟಿ ಸೊಲ್ಯೂಷನ್ಸ್ ಜೆ.ವಿ ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಮೂಲಗಳ ಪ್ರಕಾರ ಮಹಾರಾಷ್ಟ್ರ ಸರ್ಕಾರ ಚೀನಾ ಮೂಲದ ಇತ್ತೀಚೆಗೆ ವಿಶ್ವದ 12 ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು ಈ ಪೈಕಿ ಚೀನಾ ಮೂಲದ ಮೂರು ಸಂಸ್ಥೆಗಳು ಕೂಡ ಸೇರಿವೆ ಎನ್ನಲಾಗಿದೆ.
ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ನಾವೆಲ್ಲರೂ ಮತ್ತಷ್ಟು ಒಗ್ಗಟ್ಟು ಪ್ರದರ್ಶನ ತೋರುವ ಅವಶ್ಯಕತೆ. ಹಾಗಾಗಿ ಮಾಡಿಕೊಂಡ ಒಪ್ಪಂದವನ್ನು ರದ್ದುಗೊಳಿಸಬೇಕೆಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟವು ಮಹಾ ಸಿಎಂ ಅವರನ್ನು ಒತ್ತಾಯಿಸಿದೆ.
ಗಲ್ವಾನ್ ಕಣಿವೆ ಪ್ರದೇಶದಲ್ಲಿ ಇತ್ತೀಚೆಗೆ ಚೀನಾ ಹಾಗೂ ಭಾರತದ ನಡುವೆ ನಡೆದ ಸಂಘರ್ಷ ನಡೆದಿದ್ದು ಘಟನೆ ನಡೆಯುವ ಕೆಲವೇ ಗಂಟೆಗಳ ಮೊದಲು 'ಮ್ಯಾಗ್ನೆಟಿಕ್ ಮಹಾರಾಷ್ಟ್ರ 2.0' ಅಡಿಯಲ್ಲಿ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.