ನವದೆಹಲಿ: ನ್ಯಾಶನಲ್ ಜನರಲ್ ಇನ್ಶೂರೆನ್ಸ್, ಯುನೈಟೆಡ್ ಇಂಡಿಯಾ ಮತ್ತು ಓರಿಯಂಟಲ್ ಇನ್ಶೂರೆನ್ಸ್ ಕಂಪನಿಗಳ ಬಂಡವಾಳೀಕರಣಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದ್ದು, ಈ ಮೂಲಕ 2500 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಧಿವೇಶನದಲ್ಲಿ ಕೀಟನಾಶಕ ನಿರ್ವಹಣಾ ಮಸೂದೆ ಜಾರಿಗೆ ತರಲು ಕ್ಯಾಬಿನೆಟ್ ನಿರ್ಧರಿಸಿದೆ. ಈ ಮಸೂದೆಯು ರೈತರಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಕೀಟನಾಶಕಗಳು ದೊರೆಯುವಂತೆ ಮಾಡುತ್ತದೆ ಎಂದರು.
ಸುಸ್ಥಿರ ಮೀನುಗಾರಿಕೆ ಅಭಿವೃದ್ಧಿ ಕ್ಷೇತ್ರದಲ್ಲಿ ಭಾರತ ಮತ್ತು ಐಸ್ಲ್ಯಾಂಡ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲು ಸಂಪುಟ ಅನುಮೋದನೆ ನೀಡಿದೆ. ಇಬ್ಬಗೆ ತೆರಿಗೆ ತಪ್ಪಿಸಲು ಮತ್ತು ಆದಾಯದ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ ಹಣಕಾಸಿನ ವಂಚನೆಯನ್ನು ತಡೆಗಟ್ಟಲು ಭಾರತ ಮತ್ತು ಶ್ರೀಲಂಕಾ ನಡುವಿನ ಒಪ್ಪಂದಕ್ಕೆ ತಿದ್ದುಪಡಿ ಮಾಡುವ ಪ್ರೋಟೋಕಾಲ್ ಅನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ ಎಂದರು.
ಮಸೂದೆಯ ವ್ಯಾಪ್ತಿಯನ್ನು ವಿಸ್ತರಿಸಲು ‘ವಿವಾದ್ ಸೆ ವಿಶ್ವಾಸ್’ ಬಿಲ್ನ ಬದಲಾವಣೆಗಳನ್ನು ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿದೆ.