ಶ್ರೀನಗರ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಲಾಕ್ಡೌನ್ ಸಂಪೂರ್ಣ ತೆರವುಗೊಳಿಸುವ ಮುನ್ನವೇ ಜಮ್ಮು ಮತ್ತು ಕಾಶ್ಮೀರದಲ್ಲಿ 3 ದಶಕಗಳಿಂದ ನಡೆಯುತ್ತಿರುವ ಉಗ್ರವಾದಿ ಚಟುವಟಿಕೆಗಳನ್ನು ಸಂಪೂರ್ಣ ನಿರ್ನಾಮ ಮಾಡಲು ಅಧಿಕಾರಿಗಳು ಮತ್ತು ಭದ್ರತಾ ಪಡೆಗಳು ಪಣ ತೊಟ್ಟಿವೆ ಎಂದು ತಿಳಿದು ಬಂದಿದೆ. ಉಗ್ರವಾದಿಗಳನ್ನು ಮಟ್ಟ ಹಾಕಲು ಭದ್ರತಾ ಪಡೆಗಳು ಈ ಬಾರಿ ಪೂರ್ಣ ಭಿನ್ನವಾದ ಕಾರ್ಯಾಚರಣೆಗಿಳಿದಿವೆ.
ಕೊರೊನಾ ಲಾಕ್ಡೌನ್ ಘೋಷಣೆಯಾದ ನಂತರ ಈವರೆಗೆ 91 ಉಗ್ರವಾದಿಗಳನ್ನು ನಿರ್ನಾಮ ಮಾಡಲಾಗಿದೆ. ಲಾಕ್ಡೌನ್ ಸಮಯದಲ್ಲಿ ಭದ್ರತಾ ಪಡೆಗಳು ಒಟ್ಟು 37 ಎನ್ಕೌಂಟರ್ ಕಾರ್ಯಾಚರಣೆ ಮಾಡಿವೆ ಎಂಬುದು ಗಮನಾರ್ಹ. ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನ ತೆಗೆದು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ನಂತರ 2019 ರ ಆಗಸ್ಟ್ 5 ರಿಂದಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಈ ಲಾಕ್ಡೌನ್ ಮುಗಿದ ಒಂದೇ ತಿಂಗಳಲ್ಲಿ ಕೊರೊನಾ ಲಾಕ್ಡೌನ್ ವಿಧಿಸಲಾಗಿದ್ದು ಭದ್ರತಾ ಪಡೆಗಳಿಗೆ ಭಾರಿ ಮೇಲುಗೈ ಸಾಧಿಸಲು ಅನುಕೂಲವಾಗಿದೆ.
ದಕ್ಷಿಣ ಕಾಶ್ಮೀರದ ಶೋಪಿಯಾನ್, ಪುಲ್ವಾಮಾ ಮತ್ತು ಕುಲ್ಗಾಮ್ಗಳಲ್ಲಿ ಉಗ್ರವಾದಿಗಳಿಗೆ ಭಾರಿ ಜನಬೆಂಬಲವಿದೆ. ಆದರೆ ಇವೇ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು 22 ಉಗ್ರರನ್ನು ಹೊಡೆದುರುಳಿಸಿವೆ. ಜೊತೆಗೆ ಹಿಜ್ಬುಲ್ ಮುಜಾಹಿದೀನ್ ಚೀಫ್ ಕಮಾಂಡರ್ ರಿಯಾಜ್ ನಾಯ್ಕೂ ಸಹ ಗುಂಡಿಗೆ ಬಲಿಯಾಗಿದ್ದಾನೆ.
"ಲಾಕ್ಡೌನ್ ಒಂದು ರೀತಿಯಲ್ಲಿ ಭದ್ರತಾ ಪಡೆಗಳಿಗೆ ಅನುಕೂಲಕರವಾಗಿ ಪರಿಣಮಿಸಿದೆ. ಮೀನಿಗೆ ನೀರಿನ ಆಸರೆ ಇದ್ದಂತೆ ಜನ ಉಗ್ರರಿಗೆ ಬೆಂಬಲ ನೀಡುತ್ತಾರೆ. ನೀರು ಹರಿಯುವುದನ್ನು ನಿಲ್ಲಿಸಿಬಿಟ್ಟರೆ ಮೀನುಗಳು ತಾವಾಗಿಯೇ ಸಾತಯುತ್ತವೆ." ಎಂದು ಕಾಶ್ಮೀರ ವಿಷಯಗಳ ತಜ್ಞರೊಬ್ಬರು ಈಟಿವಿ ಭಾರತ್ಗೆ ಹೇಳಿದರು.
2008 ರಿಂದ ಹತರಾದ ಉಗ್ರವಾದಿಗಳ ಅಂತ್ಯಸಂಸ್ಕಾರಗಳ ಸಮಯದಲ್ಲಿ ಬೃಹತ್ ಮೆರವಣಿಗೆ ನಡೆಸಲಾಗುತ್ತಿತ್ತು. ಇದರಿಂದ ಸ್ಥಳೀಯ ಜನತೆ ಭಾರತ ಸರಕಾರದ ವಿರುದ್ಧ ತಮ್ಮ ಭಾವನೆಗಳನ್ನು ಹೊರಹಾಕಲು ಅವಕಾಶ ಸಿಗುತ್ತಿತ್ತು. ಆದರೆ ಈಗ ಲಾಕ್ಡೌನ್ ಸಮಯದಲ್ಲಿ ಮೃತ ಉಗ್ರರ ಶವಗಳನ್ನು ಭದ್ರತಾ ಪಡೆಗಳು ದೂರದ ಅರಣ್ಯದಲ್ಲಿ ಯಾರಿಗೂ ಗೊತ್ತಾಗದಂತೆ ಹುಗಿಯುತ್ತಿದ್ದಾರೆ. ಹೀಗಾಗಿ ಹೊಸ ಯುವಕರು ಉಗ್ರವಾದಿಗಳ ಪಡೆ ಸೇರಿಕೊಳ್ಳಲು ಅವಕಾಶ ಸಿಗದಂತಾಗಿದೆ.