ತಮಿಳುನಾಡು: ಮರಕ್ಕೆ ಕಟ್ಟಿದ್ದ ಗೂಳಿಯನ್ನು ಕಂಠಪೂರ್ತಿ ಕುಡಿದಿದ್ದ ಯುವಕರು ರೊಚ್ಚಿಗೆಬ್ಬಿಸಿದ ಪರಿಣಾಮ ಅದು ಮರಕ್ಕೆ ತಲೆ ಗುದ್ದಿ ಗಾಯಗೊಂಡು ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.
ಕೃಷ್ಣಗಿರಿ ಜಿಲ್ಲೆಯ ಪಪ್ಪರಪಟ್ಟಿಯಲ್ಲಿ ಗ್ರಾಮದ ಆಡಳಿತಾಧಿಕಾರಿಯೊಬ್ಬರಿಗೆ ಸೇರಿದ ಗೂಳಿ ಇದಾಗಿದೆ. ಮರಕ್ಕೆ ಕಟ್ಟಿದ್ದ ಗೂಳಿಯನ್ನ ಕುಡಿದ ನಶೆಯಲ್ಲಿದ್ದ ಯುವಕರು ಕಲ್ಲಿನಿಂದ ಹೊಡೆದು ಚಿತ್ರಹಿಂಸ ನೀಡಿದ್ದಾರೆ. ಆಗ ಗೂಳಿ ಓರ್ವನ ಮೇಲೆ ದಾಳಿಗೆ ಮುಂದಾಗಿದೆ. ಆದರೆ ಆತ ತಪ್ಪಿಸಿಕೊಂಡು ಮರದ ಮತ್ತೊಂದು ಬದಿಯಲ್ಲಿ ಸುರಕ್ಷಿತವಾಗಿ ನಿಂತು ಗೂಳಿ ಮತ್ತಷ್ಟು ರೊಚ್ಚಿಗೇಳುವಂತೆ ಮಾಡಿದ್ದಾನೆ. ಹಿಂಸೆ ತಡೆಯಲಾಗದ ಗೂಳಿ ತನ್ನ ತಲೆಯನ್ನು ಮರಕ್ಕೆ ಜೋರಾಗಿ ಗುದ್ದಿದ ಪರಿಣಾಮ ಕೊಂಬು ಹಾಗೂ ಬಾಯಿಯಿಂದ ರಕ್ತ ಸುರಿಯಲಾರಂಭಿಸಿದೆ. ಇದನ್ನು ಮತ್ತೊಬ್ಬ ಯುವಕ ವಿಡಿಯೋ ಮಾಡಿದ್ದಾನೆ.
ಮರಕ್ಕೆ ಕಟ್ಟಿರುವ ಎತ್ತನ್ನು ಯುವಕರು ಪ್ರಚೋದಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಕಂಠಪೂರ್ತಿ ಕುಡಿದಿದ್ದ ಯುವಕರಿಂದ ಗೂಳಿ ದುರಂತ ಅಂತ್ಯ ಕಾಣುವಂತಾಗಿದೆ. ತನ್ನ ತಲೆಯನ್ನು ಮರಕ್ಕೆ ಗುದ್ದಿದ ಗೂಳಿ ತೀವ್ರ ರಕ್ತ ಸ್ರಾವವಾಗಿ ನೆಲಕ್ಕೆ ಮಂಡಿಯೂರಿ ಪ್ರಜ್ಞೆ ತಪ್ಪಿ ಬಿದ್ದಿದೆ. ಬಳಿಕ ಯುವಕರು ಸ್ಕೂಟರ್ ಹತ್ತಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಎತ್ತಿಗೆ ಚಿಕಿತ್ಸೆ ಕೊಡಿಸಿದರೂ ಅದನ್ನು ಉಳಿಸಿಕೊಳ್ಳಲಾಗಲಿಲ್ಲ. ಗೂಳಿ ಸಾವಿಗೆ ಹಳ್ಳಿಯ ಜನರು ಕಣ್ಣೀರು ಸುರಿಸಿದ್ದಾರೆ. ಅಲ್ಲದೇ ಅದಕ್ಕೆ ಪೂಜೆ ಮಾಡಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಹೀಗೆ ಗೂಳಿಯನ್ನು ಪ್ರಚೋದಿಸಿದ ಯುವಕ ಲೋಕೇಶ್ ಎಂದು ಗುರುತಿಸಲಾಗಿದೆ.