ನವದೆಹಲಿ: ಕೇಂದ್ರ ಸ್ವಾಯುತ್ತ ಸಂಸ್ಥೆ ಭಾರತ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್)ನಲ್ಲಿ4ಜಿ ತಂತ್ರಜ್ಞಾನದ ಉನ್ನತೀಕರಣಕ್ಕಾಗಿ ಚೀನಿ ಉಪಕರಣಗಳನ್ನು ಬಳಸದಿರಲು ಟೆಲಿಕಾಂ ಇಲಾಖೆ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಚೀನಾದೊಂದಿಗೆ ಸಂಘರ್ಷ ತಾರಕಕ್ಕೇರಿದ್ದು, ಪ್ಯಾಂಗಾಂಗ್ ಸೋ, ಗಾಲ್ವಾನ್ ಕಣಿವೆ, ಡೆಮ್ಚೋಕ್ ಯಲ್ಲಿ ಚೀನಾ ಕ್ಯಾತೆ ತೆಗೆದು ಭಾರತೀಯ ಯೋಧರ ಸಾವಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಟೆಲಿಕಾಂ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.
ಚೀನಾದ ಉತ್ಪಾದಿತ ವಸ್ತುಗಳನ್ನು ಬಹಿಷ್ಕರಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದು, ಎಂಟಿಎನ್ಎಲ್ (ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್)ಗೂ ಇದೇ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದೆ.
ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಕೂಡಾ ಚೀನಾ ಸಲಕರಣೆಗಳ ಮೇಲೆ ಕಡಿಮೆ ಅವಲಂಬಿತವಾಗುವಂತೆ ಸೂಚನೆ ನೀಡಲು ಟೆಲಿಕಾಂ ಇಲಾಖೆ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಕೆಲವು ದಿನಗಳ ಹಿಂದೆ ಚೀನಿ ಉತ್ಪಾದಿತ ಟೆಲಿಕಾಂ ಉಪಕರಣಗಳಲ್ಲಿ ಸೈಬರ್ ಭದ್ರತೆ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿತ್ತು.
ಚೀನಾ ವಿರುದ್ಧ ದೇಶದಲ್ಲಿ ಪ್ರತಿಭಟನೆಗಳು ತೀವ್ರವಾದ ಬೆನ್ನಲ್ಲೇ ಚೀನಾ ಮೊಬೈಲ್ ಕಂಪನಿ ತನ್ನ 5ಜಿ ಹ್ಯಾಂಡ್ ಸೆಟ್ ಬಿಡುಗಡೆಯ ಯೂಟ್ಯೂಬ್ ನೇರಪ್ರಸಾರ ಸ್ಥಗಿತಗೊಳಿಸಿತ್ತು. ಕೆಲ ಗಂಟೆಗಳ ನಂತರ ಮೊಬೈಲ್ ಲಾಂಚ್ ಮಾಡಿದ್ದರ ರೆಕಾರ್ಡೆಡ್ ವಿಡಿಯೋವೊಂದನ್ನು ಅಪ್ಲೋಡ್ ಮಾಡಿತ್ತು.
ಭಾರತದಲ್ಲಿ ಈಗ ಕ್ಸಿಯೋಮಿ, ವಿವೋ, ರಿಯಲ್ಮಿ, ಒಪ್ಪೋ ಮೊಬೈಲ್ ಹ್ಯಾಂಡ್ಸೆಟ್ಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಚೀನಾದಲ್ಲಿ ಈ ವರ್ಷದಲ್ಲಿ ಮಾರ್ಚ್ವರೆಗೆ ಉತ್ಪಾದನೆಯಾಗಿರುವ ಶೇಕಡಾ 76ರಷ್ಟು ಹ್ಯಾಂಡ್ಸೆಟ್ಗಳು ಭಾರತಕ್ಕೆ ರಫ್ತಾಗಿವೆ. ನಂತರದ ಸ್ಥಾನದಲ್ಲಿ ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಮೊಬೈಲ್ ಕಂಪನಿ ಇದೆ.