ನವದೆಹಲಿ: ಗಡಿ ಭದ್ರತಾ ಪಡೆ (ಬಿಎಸ್ಎಫ್) ಭಾರತದ ನಾಲ್ಕು ಗಡಿ ಗಸ್ತು ಪಡೆಗಳಲ್ಲಿ ಒಂದಾಗಿದೆ ಮತ್ತು ಗೃಹ ಸಚಿವಾಲಯದ ನಿಯಂತ್ರಣದಲ್ಲಿರುವ ಏಳು ಕೇಂದ್ರ ಪೊಲೀಸ್ ಪಡೆಗಳಲ್ಲಿ (ಸಿಪಿಎಫ್) ಅತ್ಯಂತ ಪ್ರಮುಖವಾಗಿದೆ.
ಗಡಿ ರಕ್ಷಣೆ ಬಿಎಸ್‌ಎಫ್‌ನ ಪ್ರಮುಖ ಕಾರ್ಯವಾಗಿದ್ದರೂ, ಭಾರತದಲ್ಲಿ ಹೆಚ್ಚುತ್ತಿರುವ ಆಂತರಿಕ ಭದ್ರತಾ ಬೆದರಿಕೆಗಳು, ಭಯೋತ್ಪಾದನಾ ನಿಗ್ರಹ, ವಿಪತ್ತು ನಿರ್ವಹಣೆ ಮತ್ತು ಶಾಂತಿಪಾಲನೆಯಂತಹ ಇತರ ಕಾರ್ಯಗಳಲ್ಲೂ ತೊಡಗಿಕೊಂಡಿದೆ. ಇದು ವಿಶ್ವದ ಅತಿದೊಡ್ಡ ಗಡಿ ಕಾವಲು ಪಡೆ. ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಬಿಎಸ್ಎಫ್ ಭಾರತ ಸರ್ಕಾರದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿರುವ ಉದಾಹರಣೆಯಿದೆ.
ಬಿಎಸ್‌ಎಫ್‌ನ ಇತಿಹಾಸ
ಭಾರತದ ಗಡಿಗಳನ್ನು ಕಾಪಾಡುವ ಉದ್ದೇಶದಿಂದ ಬಿಎಸ್ಎಫ್ ಅನ್ನು ಡಿಸೆಂಬರ್ 1, 1965ರಂದು ರಚಿಸಲಾಯಿತು. ಭಾರತೀಯ ಗಡಿಯಲ್ಲಿ ಪಾಕಿಸ್ತಾನದ ಉಪಟಳ ಹೆಚ್ಚಾದ ನಂತರ 1965ರಿಂದ ಇಂಡೋ-ಪಾಕಿಸ್ತಾನ ಗಡಿಯಲ್ಲಿ ಕಾರ್ಯನಿರ್ವಹಿಸಲು ಬಿಎಸ್ಎಫ್ ಅನ್ನು ಹೆಚ್ಚಾಗಿ ಬಳಸಿಕೊಳ್ಳಲಾಯಿತು.
ಬಿಎಸ್ಎಫ್ ರಚನೆಯ ಮೊದಲು, ಇಂಡೋ-ಪಾಕ್ ಗಡಿಯನ್ನು 1947ರಿಂದ 1965ರವರೆಗೆ ರಾಜ್ಯ ಪೊಲೀಸ್ ಪಡೆಗಳು ಕಾವಲು ಕಾಯುತ್ತಿದ್ದವು. ಕೇಂದ್ರ ಸರ್ಕಾರದಿಂದ ಬೇರ್ಪಟ್ಟು ಕಾರ್ಯನಿರ್ವಹಿಸುತ್ತಿದ್ದು, ಆಯಾ ರಾಜ್ಯಗಳು ಮಾತ್ರ ಗಡಿ ಸಂರಕ್ಷಣೆಯಲ್ಲಿ ತೊಡಗಿಕೊಂಡಿದ್ದವು.
ರಾಜ್ಯಗಳು ಗಡಿ ಸಂರಕ್ಷಣಾ ಜವಾಬ್ದಾರಿ ಹೊಂದಿದ್ದ ಕಾರಣದಿಂದ ತರಬೇತಿ, ಸಂಪನ್ಮೂಲಗಳ ಕೊರತೆಯೂ ಅವುಗಳನ್ನು ಕಾಡುತ್ತಿತ್ತು. ಇದರೊಂದಿಗೆ ಕೇಂದ್ರ ಪೊಲೀಸ್ ಪಡೆಯೊಂದಿಗೆ ಕೂಡಾ ಸಂಪರ್ಕ ಸಾಧಿಸಲು ಕಷ್ಟವಾಗುತ್ತಿತ್ತು. ಜೊತೆಗೆ ಗುಪ್ತಚರ ಇಲಾಖೆಯ ಬೆಂಬಲ ಕೂಡಾ ರಾಜ್ಯ ಪೊಲೀಸ್ ಪಡೆಗಳಿಗೆ ಕಡಿಮೆ ಇತ್ತು.
ಬಿಎಸ್ಎಫ್ ಸುಮಾರು 159 ಬೆಟಾಲಿಯನ್ಗಳನ್ನು ಹೊಂದಿದ್ದು ಮಹಾ ನಿರ್ದೇಶಕರು ಇದಕ್ಕೆ ನೇತೃತ್ವ ವಹಿಸಿಕೊಂಡಿರುತ್ತಾರೆ. ಗುಪ್ತಚರ, ಐಟಿ, ತರಬೇತಿ, ಆಡಳಿತ ಮುಂದಾದ ಇಲಾಖೆಗಳಿಗೂ ಪೂರಕವಾಗಿ ಬಿಎಸ್ಎಫ್ ಕೆಲಸ ಮಾಡುತ್ತದೆ.
ಸಮುದ್ರ ಮತ್ತು ವಾಯುಯಾನ ಸಾಮರ್ಥ್ಯಗಳನ್ನು ಹೊಂದಿರುವ ಭಾರತದ ಕೆಲವೇ ಶಕ್ತಿಗಳಲ್ಲಿ ಬಿಎಸ್ಎಫ್ ಕೂಡ ಇದ್ದು, ತನ್ನ ಕಾರ್ಯಗಳನ್ನು ದೇಶೀಯ ಭದ್ರತೆ ಜೊತೆಗೆ ಕಾನೂನು ಸುವ್ಯವಸ್ಥೆ ಕ್ಷೇತ್ರಕ್ಕೂ ವಿಸ್ತರಿಸಿಕೊಂಡಿದೆ.
ಬಿಎಸ್‌ಎಫ್‌ನ ಕಾರ್ಯಗಳು
ಗಡಿ ರಕ್ಷಣೆ: ಗಡಿ ರಕ್ಷಣೆ ಬಿಎಸ್‌ಎಫ್‌ನ ಮುಖ್ಯ ಕರ್ತವ್ಯವಾಗಿದ್ದು, ಇಂಡೋ-ಪಾಕಿಸ್ತಾನ ಗಡಿ ಅಂದರೆ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳ ಉದ್ದಕ್ಕೂ 2,290 ಕಿ.ಮೀ ಉದ್ದದ ಅಂತರರಾಷ್ಟ್ರೀಯ ಗಡಿಯಲ್ಲಿ ಪಹರೆ ಕಾಯುತ್ತದೆ.
ಒಳನುಸುಳುವಿಕೆ ತಡೆ: ಜಮ್ಮು ಮತ್ತು ಕಾಶ್ಮೀರದಲ್ಲಿ 237 ಕಿ.ಮೀ ಉದ್ದದಲ್ಲಿ ಅಕ್ರಮ ವಲಸೆ, ಒಳನುಸುಳುವಿಕೆ ಮತ್ತು ದೇಶ ವಿರೋಧಿಗಳ ಪತ್ತೆ, ಅಪರಾಧ ಚಟುವಟಿಕೆಗಳು ಮತ್ತು ಕಳ್ಳಸಾಗಣೆ ಮುಂತಾದ ಕರ್ತವ್ಯಗಳನ್ನು ನಿರ್ವಹಿಸುತ್ತದೆ.
ಭಯೋತ್ಪಾದನೆ ವಿರೋಧಿ: ಭಾರತ ಎದುರಿಸುತ್ತಿರುವ ವಿವಿಧ ಭಯೋತ್ಪಾದಕ ಕೃತ್ಯಗಳು ಹಾಗೂ ಮತ್ತು ಪ್ರತ್ಯೇಕತಾವಾದಿ ಬೆದರಿಕೆಗಳನ್ನು ತಗ್ಗಿಸುವಲ್ಲಿ ಬಿಎಸ್‌ಎಫ್ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಉಗ್ರರ ವಿರುದ್ಧ ಹೋರಾಡುವುದು, ಪಂಜಾಬ್ ಪೊಲೀಸ್ ಪಡೆಗಳಿಗೆ ತರಬೇತಿ ನೀಡುವುದು ಮತ್ತು ಗಡಿ ಬೇಲಿಗಳ ನಿರ್ಮಾಣಕ್ಕೆ ಅನುಕೂಲ ಕಲ್ಪಿಸುವಲ್ಲಿ ಬಿಎಸ್ಎಫ್ ತೊಡಗಿಸಿಕೊಂಡಿದೆ.
ಕಾನೂನು ಸುವ್ಯವಸ್ಥೆ: ಗೃಹ ಸಚಿವಾಲಯದ ಅಡಿಯಲ್ಲಿ ಸಶಸ್ತ್ರ ಪೊಲೀಸ್ ಪಡೆಯಾಗಿರುವ ಬಿಎಸ್ಎಫ್ ಗಡಿಯಿಂದ ದೂರದಲ್ಲಿರುವ ಪ್ರದೇಶಗಳಲ್ಲಿ ದೇಶೀಯ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಕೂಡಾ ಈ ಪಡೆ ಬಳಕೆಯಾಗುತ್ತಿದೆ.
ವಿಪತ್ತು ನಿರ್ವಹಣೆ: ಬಿಎಸ್ಎಫ್ ವಿಪತ್ತು ನಿರ್ವಹಣೆ ಸಾಮರ್ಥ್ಯ ಹೊಂದಿದ್ದು, ಕೆಲ ಸಂದರ್ಭದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರಾಕೃತಿಕ ವಿಕೋಪಗಳ ವೇಳೆ ರಾಜ್ಯಗಳ ಸಹಾಯಕ್ಕೆ ಧಾವಿಸುತ್ತದೆ.
ನಾಗರಿಕ ವ್ಯವಹಾರಗಳು: ಕೆಲವೊಂದು ಯೋಜನೆಗಳಲ್ಲಿ ಸ್ಥಳೀಯ ಮೂಲಸೌಕರ್ಯ, ಶಾಲೆಗಳು ಮತ್ತು ಚಿಕಿತ್ಸಾಲಯಗಳನ್ನು ನಿರ್ಮಿಸುವುದು, ಉಚಿತ ವೈದ್ಯಕೀಯ ತಪಾಸಣೆ, ವೃತ್ತಿಪರ ತರಬೇತಿ ಮತ್ತು ಇತರ ಕಾರ್ಯಗಳಲ್ಲಿ ಬಿಎಸ್ಎಫ್ ತೊಡಗಿಕೊಳ್ಳುತ್ತದೆ.
ಯುಎನ್ ಶಾಂತಿಪಾಲನಾ ಕಾರ್ಯಾಚರಣೆಗಳು: ಭಾರತ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಗಿದ್ದು, ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ತನ್ನ ಸೈನ್ಯವನ್ನು ವಿದೇಶಕ್ಕೆ ಕಳುಹಿಸುತ್ತದೆ. ನಮೀಬಿಯಾ, ಕಾಂಬೋಡಿಯಾ, ಮೊಜಾಂಬಿಕ್, ಅಂಗೋಲಾ, ಬೋಸ್ನಿಯಾ ಮತ್ತು ಹರ್ಜೆಗೋವಿನಾ ಮತ್ತು ಹೈಟಿಯಲ್ಲಿ ಬಿಎಸ್ಎಫ್ ತೊಡಗಿಸಿಕೊಂಡಿದೆ.
ಸೇವೆಯಲ್ಲಿರುವಾಗ ಹುತಾತ್ಮರಾದ ಬಿಎಸ್ಎಫ್ ಯೋಧರ ಮಾಹಿತಿ
ಗೆಜೆಟ್ ಅಧಿಕಾರಿಗಳು | ಅಧೀನ ಅಧಿಕಾರಿಗಳು | ಇತರೆ ಅಧಿಕಾರಿಗಳು | ಒಟ್ಟು | ||||||
2017 | 2018 | 2019 | 2017 | 2018 | 2019 | 2017 | 2018 | 2019 | |
8 | 9 | 5 | 48 | 54 | 46 | 199 | 184 | 172 | 725 |