ನವದೆಹಲಿ : ಜಮ್ಮುವಿನ ಅಂತಾರಾಷ್ಟ್ರೀಯ ಗಡಿಯಲ್ಲಿ ನಿಯೋಜನೆಗೊಂಡಿದ್ದ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಯೋಧನೊಬ್ಬನನ್ನು ಮಾದಕ ವಸ್ತು ಕಳ್ಳ ಸಾಗಣೆ ಪ್ರಕರಣದಲ್ಲಿ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ನಿವಾಸಿಯಾಗಿರುವ ಯೋಧನಿಂದ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಇವರನ್ನು ಸಾಂಬಾ ಸೆಕ್ಟರ್‌ನಲ್ಲಿ ನಿಯೋಜಿಸಲಾಗಿತ್ತು. ಬಂಧಿತ ಯೋಧನ ಹೆಸರನ್ನು ಬಹಿರಂಗಪಡಿಸಿಲ್ಲ.
ಬಂಧಿತನಿಂದ ಒಂದು ಪಿಸ್ತೂಲ್, 9 ಎಂಎಂ ಕ್ಯಾಲಿಬರ್ ಗನ್‌ನ 80 ಗುಂಡುಗಳು, 12 ಸುತ್ತು ಬೋರ್ ರೈಫಲ್, 2 ಮ್ಯಾಗಜೀನ್ ಮತ್ತು 3 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಜಮ್ಮು, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಪಾಕಿಸ್ತಾನದೊಂದಿಗೆ 3,300 ಕಿ.ಮೀ ಉದ್ದದ ಗಡಿಯನ್ನು ಬಿಎಸ್ಎಫ್ ಯೋಧರ ಪಡೆ ಕಾವಲು ಕಾಯುತ್ತದೆ.