ನವದೆಹಲಿ: ದೇಶದ ಅತಿ ದೊಡ್ಡ ಹಾಗೂ ಸುರಕ್ಷಿತ ಜೈಲೆಂದು ಹೆಸರಾದ ತಿಹಾರ್ ಜೈಲಿನಲ್ಲಿ ಕೈದಿಯೊಬ್ಬ ಮತ್ತೋರ್ವ ಕೈದಿಯ ಕೊಲೆ ಮಾಡಿದ್ದಾನೆ. ತನ್ನ ಸಹೋದರಿ ಮೇಲೆ ಅತ್ಯಾಚಾರವೆಸಗಿದ್ದ ಮತ್ತೋರ್ವ ಕೈದಿ ಮೆಹತಾಬ್ ಖಾನ್ನ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ತಿಹಾರದ 8 ನೇ ನಂಬರಿನ ಜೈಲಿನಲ್ಲಿ ಬೆಳಗಿನ ಜಾವ ಎಲ್ಲ ಕೈದಿಗಳು ಪ್ರಾರ್ಥನೆಗೆ ಹೊರಟಿದ್ದ ವೇಳೆ ಈ ಘಟನೆ ನಡೆದಿದೆ. ಕೈದಿಗಳೆಲ್ಲ ಪ್ರಾರ್ಥನೆಗಾಗಿ ಸೆಲ್ಗಳಿಂದ ಹೊರಬರುವಾಗ ಸಂತ್ರಸ್ತೆಯ ಸಹೋದರನಾಗಿರುವ ಕೈದಿಯು ನೆಲಮಹಡಿಯಿಂದ ಮೊದಲ ಮಹಡಿಗೆ ಹೋಗಿ ತಾನೇ ತಯಾರಿಸಿಟ್ಟುಕೊಂಡಿದ್ದ ಚಾಕುವಿನಿಂದ ಅತ್ಯಾಚಾರದ ಆರೋಪಿಯಾದ ಮೆಹತಾಬ್ನ ಹೊಟ್ಟೆಗೆ ಚುಚ್ಚಿ ಕೊಂದಿದ್ದಾನೆ.
ಕೊಲೆಗೀಡಾದ ಮೆಹತಾಬ್ ತನ್ನ ಸಹಕೈದಿಯ ಸಹೋದರಿ ಮೇಲೆ ಅತ್ಯಾಚಾರವೆಸಗಿ ಜೈಲು ಸೇರಿದ್ದ. ಆದರೆ ಕೊಲೆ ಪ್ರಕರಣವೊಂದರ ಆರೋಪಿಯಾಗಿದ್ದ ಸಂತ್ರಸ್ತೆಯ ಸಹೋದರ ಕೂಡ ತಿಹಾರ್ ಜೈಲಿನಲ್ಲಿದ್ದ. ಸಮಯ ಸಾಧಿಸಿದ ಆತ ಮೆಹತಾಬ್ನನ್ನು ಕೊಂದು ಸೇಡು ತೀರಿಸಿಕೊಂಡಿದ್ದಾನೆ.
ಈ ಕುರಿತು ಹರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.