ನವದೆಹಲಿ: ಸದ್ಯಕ್ಕೆ ವಿಶ್ವದ ಮುಂದಿರುವ ಎರಡು ಅತಿ ದೊಡ್ಡ ಸವಾಲುಗಳೆಂದರೆ, ಕೋವಿಡ್-19 ನಿಯಂತ್ರಣ ಹಾಗೂ ಹವಾಮಾನ ಬದಲಾವಣೆಯ ವೇಗ ಕುಗ್ಗಿಸುವುದು. ಈ ಹಿನ್ನೆಲೆಯಲ್ಲಿ ಇದೀಗ ಎರಡು ವರ್ಷಗಳ ಹಿಂದೆ ಆರಂಭಿಸಲಾದ, ಬ್ರಿಟನ್- ಭಾರತ ತಂತ್ರಜ್ಞಾನ ಪಾಲುದಾರಿಕೆ ಭಾಗವಾಗಿ, ಶೈಕ್ಷಣಿಕ ಹಾಗೂ ಉದ್ಯಮ ರಂಗದಲ್ಲಿ ಸಂಶೋಧನೆಯಲ್ಲಿ ನಿರತವಾಗಿರುವ ವಿಜ್ಞಾನಿಗಳಿಗೆ, ಕೋವಿಡ್-19 ಹಾಗೂ ಹವಾಮಾನ ಬದಲಾವಣೆ ಸವಾಲಿಗೆ ಉತ್ತರ ಕಂಡುಕೊಳ್ಳಲು ಸಂಶೋಧನೆ ಕೈಗೊಳ್ಳುವ ಸಲುವಾಗಿ 30 ಲಕ್ಷ ಪೌಂಡ್ (ಸುಮಾರು 30 ಕೋಟಿ ರೂ.) ನಾವೀನ್ಯ ಸಂಶೋಧನಾ ನಿಧಿಯನ್ನು ಬ್ರಿಟನ್ ಘೋಷಿಸಿದೆ.
ನವದೆಹಲಿಯಲ್ಲಿರುವ, ಬ್ರಿಟಿಷ್ ರಾಯಭಾರಿ ಕಚೇರಿಯಿಂದ ಈ ಸಂಬಂಧ ನೀಡಲಾಗಿರುವ ಹೇಳಿಕೆ ಪ್ರಕಾರ, ಕೋವಿಡ್ -19 ಅನ್ನು ನಿಭಾಯಿಸಲು ಅಥವಾ ಹಸಿರು ಗ್ರಹ ಪರಿಕಲ್ಪನೆಯನ್ನು ಇನ್ನಷ್ಟು ಉತ್ತೇಜಿಸಲು, ಕರ್ನಾಟಕದ ಕೃತಕ ಬುದ್ದಿಮತ್ತೆ ಹಾಗೂ ಡೇಟಾ ಕ್ಲಸ್ಟರ್ನ ತಂತ್ರಜ್ಞಾನ ಸಂಶೋಧಕರಿಂದ ಹಾಗೂ ನೆರೆಯ ಮಹಾರಾಷ್ಟ್ರದ ಭವಿಷ್ಯದ ಸಾರಿಗೆ ಸಂಪರ್ಕ ಸಾಧನ (ಫ್ಯೂಚರ್ ಮೊಬಿಲಿಟಿ) ಕ್ಲಸ್ಟರ್ನ ತಂತ್ರಜ್ಞಾನ ಸಂಶೋಧಕರಿಂದ, ಈ ಸಂಬಂಧ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.
ಈ ಯೋಜನೆಯಡಿ, 2,50,000 ಪೌಂಡ್‌ಗಳವರೆಗಿನ 12 ಅನುದಾನವನ್ನು ನೀಡುವ ಸಾಧ್ಯತೆ ಇದೆ ಎಂದು ರಾಯಭಾರ ಕಚೇರಿಯ ಹೇಳಿಕೆಯಲ್ಲಿ ವಿವರಿಸಲಾಗಿದೆ.
"ಆಸಕ್ತರು, ಶೈಕ್ಷಣಿಕ -ಕೈಗಾರಿಕಾ ತಂಡವಾಗಿ, ಪ್ರಸ್ತಾಪನೆಗಳನ್ನು ಸಲ್ಲಿಸಬೇಕಾದ ಅಗತ್ಯ ಇದೆ. ಈ ಗುಂಪು ಅಂತಾರಾಷ್ಟ್ರೀಯ ಸದಸ್ಯರನ್ನು ಹೊಂದುವುದನ್ನು ಪ್ರೋತ್ಸಾಹಿಸಲಾಗುತ್ತದೆ," ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ನಾವಿನ್ಯತಾ ಚಾಲೆಂಜ್ ಫಂಡ್‌ಗೆ ಅರ್ಜಿಯ ಜೊತೆಗೆ ಎರಡು ಪುಟಗಳ ಸಂಶೋಧನಾ ಪರಿಕಲ್ಪನೆಯ ಸಾರಾಂಶವನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 31.
ಈ ಸಂಬಂಧದ ಹೇಳಿಕೆಯಲ್ಲಿ "ಬ್ರಿಟನ್ ಹಾಗೂ ಭಾರತ, ನಾವಿನ್ಯತೆ ಹಾಗೂ ಸಂಶೋಧನೆಯಲ್ಲಿ ಪರಸ್ಪರ ಪಾಲುದಾರಿಕೆಯ ಸುದೀರ್ಘ ಇತಿಹಾಸವನ್ನು ಹೊಂದಿವೆ" ಎಂದು ಭಾರತದಲ್ಲಿನ ಬ್ರಿಟಿಷ್ ರಾಯಭಾರಿ ಫಿಲಿಪ್ ಬಾರ್ಟನ್ ತಿಳಿಸಿದ್ದಾರೆ.
"ಕೋವಿಡ್ -19 ಹರಡುವಿಕೆ ಮತ್ತು ಹವಾಮಾನ ಬದಲಾವಣೆ ನಮ್ಮ ಮುಂದಿರುವ ಎರಡು ಸವಾಲುಗಳು ಜಾಗತಿಕ ಮಟ್ಟದ್ದಾಗಿದೆ ಎಂದು ಶ್ರುತಪಡಿಸಿವೆ. ಈ ಹಿಂದೆಂದಿಗಿಂತಲೂ ತುರ್ತಾಗಿ, ಈ ಸವಾಲುಗಳನ್ನು ಮೆಟ್ಟಿ ನಿಂತು, ಜನರ ಜೀವ ರಕ್ಷಿಸಲು ಹಾಗೂ ಉತ್ತಮ ಭವಿಷ್ಯವನ್ನು ಮನುಕುಲಕ್ಕೆ ನಿರ್ಮಿಸಲು, ಶೈಕ್ಷಣಿಕ ಸಂಶೋಧನಾ ಸಂಸ್ಥೆಗಳು, ಕೈಗಾರಿಕೆ ಹಾಗೂ ಸರ್ಕಾರಗಳು ಪರಸ್ಪರ ಕೈಜೋಡಿಸಿ, ನಾವಿನ್ಯತೆ ಹಾಗೂ ಸಂಶೋಧನೆ ಕೈಗೊಳ್ಳಬೇಕಿದೆ," ಎಂದು ಅವರು ತಿಳಿಸಿದ್ದಾರೆ.
ಬ್ರಿಟಿಷ್ ರಾಯಭಾರಿ ಕಚೇರಿಯ, ಬ್ರಿಟನ್ -ಭಾರತ ತಂತ್ರಜ್ಞಾನ ಪಾಲುದಾರಿಕೆ ಯೋಜನೆಯ ಮುಖ್ಯಸ್ಥ ಕರೆನ್ ಮೆಕ್‌ಲಸ್ಕಿ, ನಮ್ಮಲ್ಲಿನ ತೆರೆಮರೆಯ ನಾವಿನ್ಯತೆ ಸಂಶೋಧಕರನ್ನು ಮುನ್ನೆಲೆಗೆ ತರುವುದು, ಈ ನಾವೀನ್ಯ ಫಂಡ್ ಉದ್ದೇಶ. ಇಂತಹ ಸಂಶೋಧಕರು, ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರಬಹುದು ಅಥವಾ ಅದಕ್ಕಿಂತಲೂ ದೊಡ್ಡ ಜಾಗತಿಕ ಬೆದರಿಕೆಯಾದ ಹವಾಮಾನ ಬದಲಾವಣೆ ತಡೆಯುವ ಗುರಿಯೊಂದಿಗೆ ಸಂಶೋಧನೆ ನಡೆಸುತ್ತಿರಬಹುದು ಎಂದು ತಿಳಿಸಿದ್ದಾರೆ.
"ನಮಗೆ ಭಾರತದೊಂದಿಗಿನ ಪಾಲುದಾರಿಕೆಯೊಂದಿಗೆ ಕೆಲಸ ಮಾಡಲು ಹೆಮ್ಮೆ ಎನಿಸುತ್ತಿದೆ. ಭಾರತ-ಬ್ರಿಟನ್ ಎರಡು ರಾಷ್ಟ್ರಗಳು, ಈಗಷ್ಟೇ ಬೆಳಕಿಗೆ ಬರುತ್ತಿರುವ ಅತ್ಯಾಧುನಿಕ ಸಂಶೋಧನೆಗಳ ಅಭಿವೃದ್ಧಿ ಹಾಗೂ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿವೆ. ಇದರ ಉದ್ದೇಶ, ಈ ಸಂಶೋಧನೆಗಳ ಲಾಭ ಎಲ್ಲರಿಗೂ ತಲುಪಲಿ ಎಂಬುದು," ಎಂದು ಅವರು ತಿಳಿಸಿದ್ದಾರೆ.
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಏಪ್ರಿಲ್ 2018 ರಲ್ಲಿ ಬ್ರಿಟನ್ ರಾಜಧಾನಿ ಲಂಡನ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಅಂದಿನ ಬ್ರಿಟಿಷ್ ಪ್ರಧಾನಿ ಥೆರೆಸಾ ಮೇ ಜೊತೆಗೆ ಮಾತುಕತೆ ನಡೆಸಿದ ಬಳಿಕ, ಬ್ರಿಟನ್-ಭಾರತ, ತಂತಜ್ಞಾನ ಪಾಲುದಾರಿಕೆ ಸ್ಥಾಪನೆಯ ಘೋಷಣೆ ಮಾಡಲಾಗಿತ್ತು.
ಪ್ರಧಾನಿ ಮೋದಿಯ ಬ್ರಿಟನ್ ಭೇಟಿಯ ಉದ್ದೇಶ, ತಂತ್ರಜ್ಞಾನ, ದ್ವಿಪಕ್ಷೀಯ ವ್ಯಾಪಾರ-ವಹಿವಾಟು ಹೆಚ್ಚಳ, ಹೂಡಿಕೆ ಮತ್ತಿತರ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರದ ಬಲವರ್ಧನೆ ಆಗಿತ್ತು. ಈ ಭೇಟಿ ಸಂದರ್ಭದಲ್ಲಿ, ಭಾರತ- ಬ್ರಿಟನ್ ನಡುವೆ, ತಂತ್ರಜ್ಞಾನ ಮೈತ್ರಿಗೆ ನಿರ್ಧರಿಸಲಾಯಿತು. ಈ ಭೇಟಿಯ ಫಲಶ್ರುತಿಯಾಗಿ ಭಾರತದ ಐಟಿ ಮತ್ತು ವ್ಯಾಪಾರ- ವ್ಯವಹಾರ ಸೇವಾ ಹೊರಗುತ್ತಿಗೆ (ಬಿಪಿಓ) ಸೇವಾ ಕ್ಷೇತ್ರದ ಸಂಸ್ಥೆಗಳ ಒಕ್ಕೂಟ ನಾಸ್ಕಾಮ್ ಮತ್ತು ಟೆಕ್ ಯುಕೆ ನಡುವೆ ಯುಕೆ-ಭಾರತ ಟೆಕ್ ಮೈತ್ರಿಯನ್ನು ಪ್ರಾರಂಭಿಸಲು ನಿರ್ಧರಿಸಲಾಯಿತು.
ಇದರ ಜೊತೆಗೆ, ಭಾರತ- ಬ್ರಿಟನ್ ತಂತ್ರಜ್ಞಾನ ಕೇಂದ್ರ, ಭಾರತ- ಬ್ರಿಟನ್ ತಂತ್ರಜ್ಞಾನ ಕ್ಲಸ್ಟರ್ ಅನ್ನು ಪರಸ್ಪರ ಸಹಭಾಗಿತ್ವದೊಂದಿಗೆ ಅಭಿವೃದ್ಧಿಪಡಿಸಲು ನಿರ್ಧರಿಸಲಾಯಿತು. ಭಾರತದಲ್ಲಿ ಸುಧಾರಿತ ಉತ್ಪಾದನಾ ಕೇಂದ್ರ ಮತ್ತು ಕೃತಕ ಬುದ್ದಿಮತ್ತೆ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ನಿರ್ಧರಿಸಲಾಯಿತು.
ಭಾರತದ ಮಹತ್ವಾಕಾಂಕ್ಷೆಯ ಆರೋಗ್ಯ ಜಿಲ್ಲೆಗಳ ಕಾರ್ಯಕ್ರಮದಲ್ಲಿ ಡಿಜಿಟಲ್ ಅರೋಗ್ಯ ರಕ್ಷಣೆ ಸೇವೆ ಒದಗಿಸಲು ಪರಸ್ಪರ ಸಹಕಾರಕ್ಕೆ ನಿರ್ಧರಿಸಲಾಯಿತು.
ಬ್ರಿಟನ್ -ಭಾರತ ತಂತ್ರಜ್ಞಾನ ಪಾಲುದಾರಿಕೆಯ ಉದ್ದೇಶವೆಂದರೆ, ಭಾರತ ಹಾಗೂ ಬ್ರಿಟನ್‌ನ ಅವಳಿ ಉದ್ಯಮಿಗಳ ಗುರುತಿಸುವಿಕೆ, ಹೂಡಿಕೆ ಅವಕಾಶ, ಸಂಶೋಧನೆ ಮತ್ತು ಅಭಿವೃದ್ದಿಗೆ ವಿಶ್ವವಿದ್ಯಾನಿಲಯಗಳ ಗುರುತಿಸುವಿಕೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ, ಹಾಗೂ ಉದ್ಯಮ ಸಾಹಸಿಗಳಿಗೆ ಉಭಯ ದೇಶಗಳ ಮಾರುಕಟ್ಟೆಗಳಿಗೆ ರಹದಾರಿ ಒದಗಿಸುವುದಾಗಿದೆ.
2022 ರ ವೇಳೆಗೆ ಬ್ರಿಟನ್ ಬಾರತದಲ್ಲಿ ಸುಮಾರು 14 ಮಿಲಿಯನ್ ಪೌಂಡ್‌ಗಳವರೆಗೆ (140 ಲಕ್ಷ) ಹೂಡಿಕೆ ಮಾಡಲಿದೆ.
ಈ ಸಹಭಾಗಿತ್ವ ಒಪ್ಪಂದದ ಪ್ರಕಾರ ಮೊದಲಿಗೆ ಬ್ರಿಟನ್ ಮಹಾರಾಷ್ಟ್ರದ ಪುಣೆಯಲ್ಲಿ ಮೊದಲಿಗೆ ಹೂಡಿಕೆ ಮಾಡಲಿದೆ. ಭವಿಷ್ಯದ ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಈ ಹೂಡಿಕೆ ನಡೆಯಲಿದೆ. ಇದು, ಕಡಿಮೆ ಮಾಲಿನ್ಯಕಾರಕ ವಾಹನಗಳ ಅಭಿವೃದ್ಧಿ, ಸ್ವಯಂ ಚಲಿಸಬಲ್ಲ ವಾಹನಗಳ ಅಭಿವೃದ್ಧಿ, ಬ್ಯಾಟರಿ ಸಂಗ್ರಹಣೆ ಮತ್ತು ಹಗುರ ತೂಕದ ವಾಹನಗಳ ಅಭಿವೃದ್ಧಿಗೆ ಗಮನ ಹರಿಸಲಿದೆ. ಈ ಬಳಿಕ, ಬೆಂಗಳೂರಿನತ್ತ ಬ್ರಿಟನ್ ಗಮನಹರಿಸಲಿದೆ. ಇಲ್ಲಿ, ಮಿಥ್ಯಾವಾಸ್ತವ (ವರ್ಚುಯಲ್ ರಿಯಾಲಿಟಿ), ಕೃತಕ ಬುದ್ದಿಮತ್ತೆ, ಮತ್ತಿತರ ವಿಷಯಗಳ ಬಗ್ಗೆ ಸಂಶೋಧನೆ ಹಾಗೂ ಅಭಿವೃದ್ಧಿ ನಡೆಸಲಾಗುತ್ತದೆ.
ಈ ಹೊಸ ನಾವೀನ್ಯ (ಇನೋವೇಶನ್) ಚಾಲೆಂಜ್ ಫಂಡ್‌ಗೆ ಸಂಬಂಧಿಸಿದಂತೆ ಬ್ರಿಟನ್‌ನ ಅಂತಾರಾಷ್ಟ್ರೀಯ ವ್ಯಾಪಾರ ಸಚಿವಾಲಯ ಹೊರಡಿಸಿರುವ ಪರಿಕಲ್ಪನಾ ಟಿಪ್ಪಣಿಯ ಪ್ರಕಾರ, ಕೋವಿಡ್ -19 ಸಾಂಕ್ರಾಮಿಕ ರೋಗದ ನಿಯಂತ್ರಣ ಹಾಗೂ ಹವಾಮಾನ ಬದಲಾವಣೆ ತಡೆಗೆ ಸಂಬಂಧಿಸಿದ ನಾನಾ ಪ್ರಸ್ತಾವನೆಗಳನ್ನು ಈ ನಿಧಿಯ ಅಡಿಯಲ್ಲಿ ಸಹಾಯ ಪಡೆಯಲು ಕಳುಹಿಸಬಹುದು. ಈ ಪ್ರಸ್ತಾವನೆಗಳು, ಕೋವಿಡ್-19ರ ನಿಯಂತ್ರಣ, ಅದರ ದುಷ್ಪರಿಣಾಮಗಳಿಂದ ಚೇತರಿಕೆ ಮತ್ತು ಹವಾಮಾನ ಬದಲಾವಣೆ ತಡೆಯಲು, ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಅನುಸರಿಸಬಹುದಾದ ಕ್ರಮಗಳ ಬಗ್ಗೆ ಸಂಬಂಧಿಸಿರಬೇಕು. ಸುರಕ್ಷತೆ ಮತ್ತು ಅನುಕೂಲಕರ ಕೋವಿಡ್-19 ನಿಯಂತ್ರಣ ವಿಧಿ ವಿಧಾನ (ವೈಯಕ್ತಿಕ ಶುಚಿತ್ವ, ಸ್ಯಾನಿಟೈಸೆಷನ್, ಸಾರ್ವಜನಿಕ ಸಾರಿಗೆಯಲ್ಲಿ ಶುಚಿತ್ವ ಕಾಪಾಡುವುದು, ಸಾಮಾಜಿಕ ಅಂತರ ಕಾಪಾಡುವುದು, ಸಂಪರ್ಕವಿಲ್ಲದ ವಿತರಣೆಗಳು)
ನವೀನ ತಂತ್ರಜ್ಞಾನದಲ್ಲಿ ಸೀಮೋಲ್ಲಂಘನ (ಹೊಸ ಶಕ್ತಿ/ ಇಂಧನ ಮೂಲಗಳು, ಅಗತ್ಯ / ವೈದ್ಯಕೀಯ ಸರಬರಾಜುಗಳಿಗಾಗಿ ತಾಪಮಾನ ನಿಯಂತ್ರಿತ ಸಾರಿಗೆ, ಡ್ರೋನ್ ಚಲನಶೀಲತೆ); ಸಂಪರ್ಕ (ಮೊದಲ ಮೈಲಿ / ಕೊನೆಯ ಮೈಲಿ ಆರೋಗ್ಯ ಸೇವೆಗಳ ವಿತರಣೆ, ಲಾಜಿಸ್ಟಿಕ್ಸ್ ಮತ್ತು ಸೇವೆಗಳ ವಿತರಣೆಗೆ ಸೂಕ್ಷ್ಮ ಚಲನಶೀಲತೆ, ಗ್ರಾಮೀಣ ಪ್ರದೇಶಗಳಿಗೆ ಸೇವೆ ವಿತರಣೆಗೆ ಯೋಜನೆ); ಶಕ್ತಿ ಪರಿವರ್ತನೆ (ಆಂತರಿಕ ದಹನಕಾರಿ ಎಂಜಿನ್ ಅಥವಾ ಐಸಿಇ ವಿದ್ಯುದೀಕರಣ, ಹೈಡ್ರೋಜನ್ ಇಂಧನ ಕೋಶಗಳ ಅಭಿವೃದ್ಧಿ, ಇಂಧನ ಕ್ಷಮತೆ ಹೆಚ್ಚಳ); ಮತ್ತು ಸ್ಮಾರ್ಟ್ ಚಲನಶೀಲತೆ (ಬುದ್ಧಿವಂತ ಸಾರಿಗೆ ವ್ಯವಸ್ಥೆಗಳು, ಪ್ರತಿ ಟ್ರಿಪ್ನ ಮರು ಹೊಂದಾಣಿಕೆ, ಬೇಡಿಕೆ-ಪೂರೈಕೆ ಹೊಂದಾಣಿಕೆ) ಇತ್ಯಾದಿಗಳು.
ಈ ನಿಧಿಯ ಪರಿಕಲ್ಪನಾ ಟಿಪ್ಪಣಿ ಪ್ರಕಾರ, ಮೇಲ್ಕಾಣಿಸಿದ ಕ್ಷೇತ್ರಗಳ ಹೊರತಾಗಿಯೂ, ಇನ್ನಿತರ ಪ್ರಸ್ತಾಪನೆಗಳಿಗೆ ಧನ ಸಹಾಯ ಮಾಡುವ ಅವಕಾಶ ಇದೆ. ಆದರೆ ಇಂತಹ ಪ್ರಸ್ತಾಪನೆಗಳು, ಭವಿಷ್ಯದ ಸಮೂಹ ಸಾರಿಗೆ ಹಾಗೂ ಚಲನಶೀಲತೆಗೆ ಸಂಬಂಧಿಸಿರಬೇಕು. ಅಥವಾ, ಹವಾಮಾನ ಬದಲಾವಣೆ ತಡೆ ಪರಿಸರ ಕಾರ್ಯಸೂಚಿ ಅಥವಾ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿರಬೇಕು.
-ಅರುಣಿಮಾ ಭೂಯಾಮ್