ಬ್ರೆಸಿಲಿಯಾ: ಬ್ರೆಜಿಲ್ ದೇಶದ ಅಧ್ಯಕ್ಷ ಜೈರ್ ಬೋಲ್ಸೊನಾರೊ ಅವರಿಗೆ ನಡೆಸಿದ ಕೊರೊನಾ ಸೋಂಕಿನ ಪರೀಕ್ಷಾ ವರದಿಗಳನ್ನು ಎರಡು ದಿನಗಳ ಒಳಗಾಗಿ ಬಿಡುಗಡೆ ಮಾಡುವಂತೆ ಅಲ್ಲಿನ ನ್ಯಾಯಾಲಯ ಆದೇಶ ಹೊರಡಿಸಿದೆ.
ಮಾರ್ಚ್ ತಿಂಗಳಿನಲ್ಲಿ 20 ಸದಸ್ಯರೊಂದಿಗೆ ಅಧ್ಯಕ್ಷ ಬೋಲ್ಸೊನಾರೊ ಆಯೋಗದೊಂದಿಗೆ ಅಮೆರಿಕಕ್ಕೆ ತೆರಳಿದ್ದರು. ಇದರಲ್ಲಿದ್ದ 20 ಸದಸ್ಯರೆಲ್ಲರೂ ಕೊರೊನಾ ಸೋಂಕಿನ ಪರೀಕ್ಷೆಗೆ ಒಳಗಾಗಿದ್ದಾರೆ. ಈ ನಿಯೋಗದಲ್ಲಿದ್ದ ಅಧ್ಯಕ್ಷ ಜೈರ್ ಸಹ ಪರೀಕ್ಷೆಗೆ ಒಳಗಾಗಿದ್ದರು. ಆದರೆ, ಈ ಬಗ್ಗೆ ಯಾವುದೇ ಮಾಹಿತಿ ಬಹಿರಂಗ ಪಡಿಸಿರಲಿಲ್ಲ.
ಹೀಗಾಗಿ ಅಧ್ಯಕ್ಷರ ಪರೀಕ್ಷಾ ವರದಿ ಬಹಿರಂಗ ಮಾಡಬೇಕು ಎಂದು ಕೆಲವರು ಕೋರ್ಟ್ ಮೊರೆ ಹೋಗಿದ್ದರು. ಈ ಬಗೆಗಿನ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಎರಡು ದಿನದ ಒಳಗಾಗಿ ಪರೀಕ್ಷಾ ವರದಿ ಬಿಡುಗಡೆ ಮಾಡದೇ ಇದ್ದಲ್ಲಿ, ದಿನಕ್ಕೆ 5 ಸಾವಿರ ರಾಯ್ಸ್ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದೆ.
ಇಲ್ಲಿನ ಸಾವೊ ಪಾಲೊ ಎಂಬ ಅಧಿಕೃತ ಬುಲೆಟಿನ್ನಲ್ಲಿ ಪ್ರಕಟವಾದ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ತೀರ್ಪು ಬಂದಿದೆ ಎಂದು ವರದಿಯಾಗಿದೆ.
ಸೋಂಕಿನಿಂದ ಮುಕ್ತವಾಗಿದ್ದೇನೆ ಎಂಬುದನ್ನು ಅಧ್ಯಕ್ಷರು ಬಹಿರಂಗ ಪಡಿಸಬೇಕು ಎಂದೂ ಕೋರ್ಟ್ ಸೂಚಿಸಿದೆ.
ಈಗಾಗಲೇ ಬ್ರೆಜಿಲ್ನಲ್ಲಿ 85 ಸಾವಿರಕ್ಕೂ ಹೆಚ್ಚಿನದಾಗಿ ಕೊರೊನಾ ಸೋಂಕಿನ ಪ್ರಕರಣಗಳು ಹಾಗೂ 6 ಸಾವಿರಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.