ಮೊರಾದಾಬಾದ್ (ಉತ್ತರ ಪ್ರದೇಶ): ಆನ್ಲೈನ್ ತರಗತಿ ವೇಳೆ ಶಿಕ್ಷಕಿಗೇ ವಿದ್ಯಾರ್ಥಿವೋರ್ವ ಅಶ್ಲೀಲ ಸಂದೇಶ ರವಾನಿಸಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಹತ್ತನೇ ತರಗತಿ ವಿದ್ಯಾರ್ಥಿಯ ವಿರುದ್ಧ ಎಫ್ಐಆರ್ ದಾಖಲಾಗಿರುವ ಘಟನೆ ಮೊರಾದಾಬಾದ್ನಲ್ಲಿ ಬೆಳಕಿಗೆ ಬಂದಿದೆ.
ವಿದ್ಯಾರ್ಥಿಯ ತಂದೆಯ ವಿರುದ್ಧವೂ ಶಿಕ್ಷಕಿಗೆ ಫೋನ್ ಮೂಲಕ ಬೆದರಿಕೆ ಹಾಕಿದ ಆರೋಪದ ಮೇಲೆ ಕೇಸ್ ದಾಖಲಾಗಿದೆ. ಮೊರಾದಾಬಾದ್ನ ಖಾಸಗಿ ಶಾಲೆಯ 30 ವರ್ಷದ ಸಮಾಜ ವಿಜ್ಞಾನ ಶಿಕ್ಷಕಿ, ತನ್ನ ವಿದ್ಯಾರ್ಥಿ ಗೂಗಲ್ ಮೀಟ್ನಲ್ಲಿ ಆನ್ಲೈನ್ ತರಗತಿ ನಡೆಸುತ್ತಿದ್ದ ವೇಳೆ ಎರಡು ಅಶ್ಲೀಲ ಸಂದೇಶಗಳನ್ನು ರವಾನಿಸಿದ್ದಾನೆ ಎಂದು ದೂರು ನೀಡಿದ್ದಾರೆ. ವಿದ್ಯಾರ್ಥಿ ಕಳಿಸಿದ ಸಂದೇಶವನ್ನು ಆನ್ಲೈನ್ ತರಗತಿ ಆಲಿಸುತ್ತಿದ್ದ ಇತರ ವಿದ್ಯಾರ್ಥಿಗಳೂ ನೋಡಿದ್ದಾರೆ. ವಿದ್ಯಾರ್ಥಿ ಅಶ್ಲೀಲ ಸಂದೇಶ ರವಾನಿಸಿದ ಬಗ್ಗೆ ಆತನ ತಂದೆಯ ಬಳಿ ತಿಳಿಸಿದ್ದೆ. ಆದರೆ, ಅವರು ತನ್ನ ಮಗನಿಗೆ ಬುದ್ಧಿ ಹೇಳುವ ಬದಲು ನನಗೇ ಬೆದರಿಕೆ ಹಾಕಿದ್ದಾರೆ ಎಂದು ಶಿಕ್ಷಕಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಶಿಕ್ಷಕಿಯ ದೂರು ಆಧರಿಸಿ ತಂದೆ ಮತ್ತು ಮಗನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ವಿದ್ಯಾರ್ಥಿಯ ಮೊಬೈಲ್ನ್ನು ಸೈಬರ್ ಸೆಲ್ಗೆ ರವಾನಿಸಲಾಗಿದೆ ಎಂದು ವೃತ್ತ ನಿರೀಕ್ಷಕ ಕುಲದೀಪ್ ಸಿಂಗ್ ತಿಳಿಸಿದ್ದಾರೆ.
ವಿದ್ಯಾರ್ಥಿ ಮತ್ತು ಆತನ ತಂದೆಯ ವಿರುದ್ಧ ಐಪಿಸಿ ಸೆಕ್ಷನ್ಸ್ 504 ಮತ್ತು 67 ಎ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆತನ ತಂದೆಯ ವಿರುದ್ಧ ಐಪಿಸಿ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಪ್ರಕರಣ ದಾಖಲಿಸಲಾಗಿದೆ ಎಂದು ಸಿವಿಲ್ ಲೈನ್ಸ್ ಎಸ್ ಹೆಚ್‌ಒ ನವಾಲ್ ಮಾರ್ವಾ ಹೇಳಿದ್ದಾರೆ.