ನವದೆಹಲಿ : ದೆಹಲಿಯಲ್ಲಿ ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಬಿಜೆಪಿ ಪಾಳಯ ಸೇರಿಕೊಂಡಿದ್ದಾರೆ. ಈಗ ಕಾಂಗ್ರೆಸ್ ಕೂಡ ಭಾರತದ ಬಾಕ್ಸಿಂಗ್ ಐಕಾನ್ ವಿಜೇಂದ್ರ ಸಿಂಗ್ಗೆ ಮಣೆ ಹಾಕಿದೆ. ಆ ಮೂಲಕ ಬಿಜೆಪಿ ತಂತ್ರಕ್ಕೆ ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿತಂತ್ರ ರೂಪಿಸಿದೆ.
ವೃತ್ತಿಪರ ಬಾಕ್ಸಿಂಗ್‌ನಲ್ಲೂ ವಿಶ್ವದ ದಿಗ್ಗಜ ಪ್ಲೇಯರ್‌ಗಳನ್ನ ಈಗಾಗಲೇ ಮಣಿಸಿರುವ ವಿಜೇಂದ್ರ ಸಿಂಗ್, ರಾಜಕೀಯದಲ್ಲೂ ಎದುರಾಳಿಗೆ ಪಂಚ್ ಕೊಡಲು ಸಿದ್ಧವಾಗಿದ್ದಾರೆ. ದೆಹಲಿಯ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ವಿಜೇಂದ್ರ ಅವರನ್ನ ಕಾಂಗ್ರೆಸ್ ಕಣಕ್ಕಿಳಿಸುತ್ತಿದೆ. 'ಬಾಕ್ಸಿಂಗ್ ಕೆರಿಯರ್‌ಗಾಗಿ ನಾನು 20 ವರ್ಷ ಕಳೆದಿರುವೆ ', ಬಾಕ್ಸಿಂಗ್ ರಿಂಗ್‌ನಲ್ಲಿ ದೇಶ ಹೆಮ್ಮೆ ಪಡುವಂತೆ ಪ್ರದರ್ಶನ ನೀಡಿರುವೆ. ಈಗ ದೇಶಕ್ಕಾಗಿ, ಜನರಿಗಾಗಿ ಏನಾದರೂ ಒಳ್ಳೇ ಸೇವೆ ಮಾಡಬೇಕಿದೆ. ಕಾಂಗ್ರೆಸ್ ನೀಡಿರುವ ಅವಕಾಶ ಸ್ವೀಕರಿಸಿರುವೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿಯವರಿಗೆ ಧನ್ಯವಾದ ಅರ್ಪಿಸುವೆ' ಅಂತಾ ರಾಜಕೀಯಕ್ಕೆ ಪದಾರ್ಪಣೆ ಮಾಡ್ತಿರುವ ವಿಜೇಂದ್ರ ಸಿಂಗ್ ಟ್ವೀಟ್‌ಮಾಡಿದ್ದಾರೆ. ಭಾರತದಲ್ಲಿ ಬಾಕ್ಸಿಂಗ್ ಪಾಪ್ಯುಲಾರಿಟಿ ಪಡೆಯಲು ಕಾರಣ ವಿಜೇಂದ್ರ ಸಿಂಗ್. ಬಾಕ್ಸಿಂಗ್ ಕ್ರೀಡೆಯಲ್ಲಿನ ಸಾಧನೆಗಾಗಿ 2010ರಲ್ಲಿ ದೇಶದ 3ನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ನೀಡಿ ವಿಜೇಂದ್ರ ಅವರನ್ನ ಸರ್ಕಾರ ಗೌರವಿಸಿದೆ. ವಿಜೇಂದ್ರ ಅವರಿಗೆ ಬಾಕ್ಸಿಂಗ್‌ನಲ್ಲಿ ಮೊದಲಿಗೆ ಒಲಿಂಪಿಕ್ ಪದಕ ಗೆದ್ದು ಕೊಟ್ಟ ಕೀರ್ತಿ ಸಲ್ಲುತ್ತೆ.
ಕಪಿಲ್ ಸ್ಪರ್ಧಿಸಲ್ಲ, ಶೀಲಾ ದೀಕ್ಷಿತ್ ಈಶಾನ್ಯ ದೆಹಲಿ ಕ್ಷೇತ್ರದಲ್ಲಿ ಕಣಕ್ಕೆ:
ನವದೆಹಲಿಯಲ್ಲಿ 7 ಲೋಕಸಭಾ ಕ್ಷೇತ್ರಗಳಿವೆ. ದಕ್ಷಿಣ ದೆಹಲಿ ಕ್ಷೇತ್ರವೂ ಸೇರಿ ನಿನ್ನೆ ಕಾಂಗ್ರೆಸ್ 7 ಅಭ್ಯರ್ಥಿಗಳನ್ನ ಘೋಷಣೆ ಮಾಡಿದೆ. 3 ಸಾರಿ ದೆಹಲಿ ಸಿಎಂ ಗದ್ದುಗೆ ಹಿಡಿದಿದ್ದ ಶೀಲಾ ದೀಕ್ಷಿತ್ ನಿನ್ನೆಯಷ್ಟೇ ದೆಹಲಿಯ 7 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನ ಘೋಷಿಸಿದ್ದರು. 1984ರ ಸಿಖ್ ವಿರೋಧಿ ದಂಗೆಯ ಆರೋಪಿ ಸಜ್ಜನ್‌ಕುಮಾರ್ ಸೋದರ ರಮೇಶ್‌ಕುಮಾರ್‌ಗೆ ಕಣಕ್ಕಿಳಿಸಲು ಮೊದಲು ಪಕ್ಷ ನಿರ್ಧರಿಸಿತ್ತು ಎನ್ನಲಾಗಿದೆ. ಆದರೆ, ಕೊನೆಗೆ ಆ ನಿರ್ಧಾರದಿಂದ ಹಿಂದೆ ಸರಿದಿದೆ. ಉಳಿದಂತೆ ದೆಹಲಿ ಪೂರ್ವ ಅರವಿಂದ್ ಸಿಂಗ್, ಚಾಂದನಿಚೌಕ್‌ನಿಂದ ಜೆಪಿ ಅಗರವಾಲ್, ದೆಹಲಿ ವಾಯವ್ಯಕ್ಕೆ ರಾಜೇಶ ಲಿಲೋಥಿಯಾ, ಮಹಾಬಲ ಮಿಶ್ರಾ ದೆಹಲಿ ಪಶ್ಚಿಮ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿದ್ದಾರೆ. ಕೇಂದ್ರದ ಮಾಜಿ ಸಚಿವ ಈ ಸಾರಿ ದೆಹಲಿಯ ಯಾವುದೇ ಕ್ಷೇತ್ರದಿಂದಲೂ ಕಣಕ್ಕಿಳಿದಿಲ್ಲ. 1 ವರ್ಷದ ಮೊದಲಷ್ಟೇ ಶೀಲಾ ದೀಕ್ಷಿತ್ ದೆಹಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆ ಸ್ವೀಕರಿಸಿದ್ದು, ಈ ಸಾರಿ ದೆಹಲಿಯ ಈಶಾನ್ಯ ಕ್ಷೇತ್ರದಿಂದ ಅವರು ಕಣಕ್ಕಿಳಿಯಲಿದ್ದಾರೆ. ಪಕ್ಷದ ಹಿರಿಯ ಮುಖಂಡ ಅಜಯ್ ಮಾಕೇನ್ ನವದೆಹಲಿ ಕ್ಷೇತ್ರದಿಂದ ಈ ಸಾರಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಮೇ 12ರಂದು ದೆಹಲಿಯಲ್ಲಿ ಮತದಾನ ನಡೆಯಲಿದೆ.