ಮುಂಬೈ: ಸಾಕಷ್ಟು ವಿವಾದದ ಸ್ವರೂಪ ಪಡೆದುಕೊಂಡಿದ್ದ ಮುಂಬೈ ನಗರದ ಪಾಲಿಹಿಲ್ಸ್ನಲ್ಲಿರುವ ಕಚೇರಿಯನ್ನು ತೆರವುಗೊಳಿಸುವುದರ ವಿರುದ್ಧ ಬಾಲಿವುಡ್ ನಟಿ ಕಂಗನಾ ರಣಾವತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ.
ತಮ್ಮ ಕಚೇರಿಯನ್ನು ತೆರವುಗೊಳಿಸದಂತೆ ಬೃಹನ್ಮುಂಬೈ ಮಹಾನಗರ ಪಾಲಿಕೆ ವಿರುದ್ಧ ಕಂಗನಾ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಗುರುವಾರ ಮಧ್ಯಾಹ್ನ ಮೂರು ಗಂಟೆಗೆ ಅರ್ಜಿ ವಿಚಾರಣೆ ನಡೆದಿತ್ತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜೆ.ಕಥಾವಲ್ಲಾ ಹಾಗೂ ನ್ಯಾಯಮೂರ್ತಿ ಚಗ್ಲಾ ಅವರಿದ್ದ ವಿಭಾಗೀಯ ಪೀಠ ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ಮುಂದೂಡಿದೆ.
ಬುಧವಾರವಷ್ಟೇ ಕಂಗನಾ ಅವರ ಕಚೇರಿಯನ್ನು ಬಿಎಂಸಿ ಧ್ವಂಸ ಮಾಡಲು ಮುಂದಾಗಿತ್ತು. ಈ ವೇಳೆ ಬಾಂಬೆ ಹೈಕೋರ್ಟ್ ಕಂಗನಾ ಅರ್ಜಿಗೆ ಸ್ಪಂದಿಸಿ, ಕಚೇರಿ ಧ್ವಂಸಗೊಳಿಸದಂತೆ ಸೂಚನೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆ ನಡೆದಿದ್ದು, ಸೆಪ್ಟೆಂಬರ್ 22ಕ್ಕೆ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಮುಂದೂಡಿದೆ. ಈ ಮೂಲಕ ಕಂಗನಾಗೆ ಮತ್ತಷ್ಟು ಸಮಯ ಸಿಕ್ಕಂತಾಗಿದ್ದು, ತಾತ್ಕಾಲಿಕ ರಿಲೀಫ್ ಸಿಕ್ಕಿದೆ.