ಕೊಲ್ಲಂ(ಕೇರಳ): ನಿನ್ನೆಯಷ್ಟೇ ನಾಪತ್ತೆಯಾಗಿದ್ದ ಆರು ವರ್ಷದ ಬಾಲಕಿ ಇಲ್ಲಿನ ಕೊಲ್ಲಂ ಬಳಿಯ ನದಿ ದಡದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಕೊಲ್ಲಂನಲ್ಲಿ ಈ ಮನಕಲಕುವ ಘಟನೆ ನಡೆದಿದೆ.
ಧನ್ಯಾ ಮತ್ತು ಪ್ರದೀಪ್ ದಂಪತಿಯ ಪುತ್ರಿ ದೇವನಂದಾ (6) ಮೃತ ಬಾಲಕಿ. ಗುರುವಾರ ಬಾಲಕಿಯ ಪೋಷಕರು ಮಗಳು ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಬಾಲಕಿಗಾಗಿ ಹುಡುಕಾಟ ನಡೆಸಿದ್ದರು.
ಈ ಕುರಿತು ಮಾಹಿತಿ ನೀಡಿದ ಪೊಲೀಸರು, ಬಾಲಕಿ ದೇವನಂದಾಳ ಮೃತದೇಹವು ನದಿ ತೀರದ ದಡದಲ್ಲಿ ಪತ್ತೆಯಾಗಿದೆ. ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡು ಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದರು.
ಬಾಲಕಿ ಸಾವಿಗೆ ಸಿಎಂ ಸಂತಾಪ:
ಬಾಲಕಿ ದೇವನಂದಾ ಸಾವಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದು, ಕಾಣೆಯಾದ ಬಾಲಕಿ ಶವವಾಗಿ ಸಿಕ್ಕಿರುವುದು ಪ್ರತಿಯೊಬ್ಬರಲ್ಲೂ ಆಘಾತ ಉಂಟು ಮಾಡಿದೆ. ಪುಟ್ಟ ಮಗುವನ್ನು ಕಳೆದುಕೊಂಡ ಅವರ ತಂದೆ-ತಾಯಿ ಹಾಗೂ ಕುಟುಂಬಸ್ಥರಿಗೆ ಈ ನೋವನ್ನು ಸಹಿಸಿಕೊಳ್ಳುವಂತಾಗಲಿ. ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಈ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಿದೆ ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.