ನವದೆಹಲಿ: ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಲು ಸುಪ್ರೀಂಕೋರ್ಟ್ ನೇಮಿಸಿರುವ ನಾಲ್ವರು ಸದಸ್ಯರ ಸಮಿತಿಯಿಂದ ಹೊರಬರುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಭೂಪಿಂದರ್ ಸಿಂಗ್ ಮಾನ್ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ರಚಿಸಿರುವ ಸಮಿತಿಯ ಕುರಿತು ರೈತ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ಅನುಮಾನ ವ್ಯಕ್ತಪಡಿಸಿದ್ದು, ಇದರಲ್ಲಿರುವ ಸದಸ್ಯರು ಈ ಹಿಂದೆ ಕೇಂದ್ರ ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ಪರವಾಗಿದ್ದರು ಎಂದು ಆರೋಪಿಸಿದ್ದವು. ಈ ಬೆನ್ನಲ್ಲೇ ಭೂಪಿಂದರ್ ಸಿಂಗ್ ಮಾನ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಸಮಿತಿಗೆ ನಾಮನಿರ್ದೇಶನ ಮಾಡಿರುವುದಕ್ಕೆ ಧನ್ಯವಾದ. ಆದರೆ, ರೈತರ ಹಿತಾಸಕ್ತಿ ವಿಷಯದಲ್ಲಿ ರಾಜಿಯಾಗುವುದಿಲ್ಲ. ಇದಕ್ಕಾಗಿ ನಾನು ಯಾವ ಹುದ್ದೆಯನ್ನಾದರೂ ತ್ಯಜಿಸಲು ಸಿದ್ಧನಿದ್ದೇನೆ. ರೈತ ಸಂಘಟನೆಗಳು ಹಾಗೂ ಜನರಲ್ಲಿ ಇರುವ ಅನುಮಾನವನ್ನು ದೂರಗೊಳಿಸಲು ಈ ನಿರ್ಧಾರ ತೆಗೆದುಕೊಂಡಿರುವೆ. ಸುಪ್ರೀಂಕೋರ್ಟ್ ರಚಿಸಿರುವ ಈ ಸಮಿತಿಯ ಸದಸ್ಯನಾಗಲು ನಾನು ನಿರಾಕರಿಸುತ್ತಿದ್ದು, ಪಂಜಾಬ್ ಹಾಗೂ ದೇಶದ ರೈತರ ಜೊತೆ ನಾನಿರಲಿದ್ದೇನೆ ಎಂದು ಭೂಪಿಂದರ್ ಸಿಂಗ್ ಮಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೇಂದ್ರದ ಮೂರು ಕೃಷಿ ಕಾನೂನುಗಳಿಗೆ ತಡೆಯಾಜ್ಞೆ ನೀಡಿದ ಸುಪ್ರೀಂಕೋರ್ಟ್