ನವದೆಹಲಿ: ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ ಎಂಬ ಲೇಖಕಿ ಅರುಂಧತಿ ರಾಯ್ ಹೇಳಿಕೆಗೆ ಬಿಜೆಪಿ ಮುಖಂಡ ಶಹನಾವಾಜ್ ಹುಸೇನ್ ವಿರೋಧ ವ್ಯಕ್ತಪಡಿಸಿದ್ದಾರೆ.
ಜರ್ಮನಿಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅರುಂಧತಿ, "ನಾಜಿಗಳು ಯಹೂದಿಗಳ ವಿರುದ್ಧ ಕೈಗೊಂಡ ಕ್ರಮಗಳಂತೆಯೇ, ಮೋದಿ ಸರ್ಕಾರವು ಮುಸ್ಲಿಮರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ" ಎಂದು ಹೇಳಿದ್ದರು. "ಮೋದಿ ಸರ್ಕಾರವು ಮುಸ್ಲಿಮರ ಮೇಲೆ ಸರ್ವಾಧಿಕಾರಿ ಮನೋಭಾವ ಪ್ರದರ್ಶಿಸುತ್ತದೆ" ಎಂದು ರಾಯ್ ಹೇಳಿದ್ದರು.
ಅರುಂಧತಿ ಅವರ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಮುಖಂಡ ಶಹನಾವಾಜ್ ಹುಸೇನ್, "ಅರುಂಧತಿ ರಾಯ್ ಅವರ ಹೇಳಿಕೆ ಖಂಡನೀಯ. ಅವರು ದೇಶಕ್ಕೆ ಕ್ಷಮೆಯಾಚಿಸಬೇಕು. ಇಂತಹ ಹೇಳಿಕೆಗಳು ಹಿಂದು ಮುಸ್ಲಿಂ ಐಕ್ಯತೆಗೆ ಮಾರಕವಾಗಿದೆ" ಎಂದರು.
"ಕೊರೊನಾ ಬಿಕ್ಕಟ್ಟನ್ನು ಸರಿಪಡಿಸಲು ಪ್ರಧಾನಿ ಮೋದಿ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಅರುಂಧತಿ ತಮ್ಮ ದೇಶದ ವಿರುದ್ಧ ವಿದೇಶಿ ಚಾನೆಲ್‌ಗೆ ಈ ರೀತಿಯಾಗಿ ಹೇಳಿಕೆ ನೀಡುವುದು ತೀವ್ರ ಖಂಡನೆಯ ವಿಷಯವಾಗಿದೆ" ಎಂದು ಹೇಳಿದರು.
"ಒಬ್ಬ ಮುಸ್ಲಿಂ ಆಗಿರುವ ನಾನು, ಭಾರತದಲ್ಲಿ ಮುಸ್ಲಿಮರು ಸುರಕ್ಷಿತರು ಎಂದು ಹೇಳಬಲ್ಲೆ, ಭಾರತದಲ್ಲಿಯೇ ಮುಸ್ಲಿಮರಿಗೆ ಹೆಚ್ಚು ಸುರಕ್ಷತೆ ಇದೆ ಎಂದು ನಾನು ಭಾವಿಸುತ್ತಾನೆ. ಆದ್ದರಿಂದ ಅರುಂಧತಿ ರಾಯ್ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕು" ಎಂದು ಹುಸೇನ್ ಹೇಳಿದರು.