ಚೆನ್ನೈ: ಇತ್ತೀಚೆಗಷ್ಟೆ ಬಿಜೆಪಿ ಸೇರ್ಪಡೆಗೊಂಡಿರುವ ಕರ್ನಾಟಕದ ಸಿಂಗಂ ಖ್ಯಾತಿಯ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈಗೆ ಇದೀಗ ಮಹತ್ವದ ಹೊಣೆಗಾರಿಕೆ ನೀಡಲಾಗಿದೆ.
ತಮಿಳುನಾಡು ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ಅಣ್ಣಾಮಲೈ ಅವರನ್ನು ನೇಮಕ ಮಾಡಿ ಹೈಕಮಾಂಡ್ ಇದೀಗ ಆದೇಶ ಹೊರಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ ಎಲ್.ಮುರುಗನ್ ಮಾಹಿತಿ ನೀಡಿದ್ದಾರೆ.
ಆಗಸ್ಟ್ 25ರಂದು ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮುರಳೀಧರನ್ ಅವರ ನೇತೃತ್ವದಲ್ಲಿ ಅವರು ಕಮಲ ಪಕ್ಷ ಸೇರ್ಪಡೆಯಾಗಿದ್ದರು. ಇದಾದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು.
ಇದನ್ನೂ ಓದಿ: ಬಿಜೆಪಿ ಸೇರಿದ ಕರ್ನಾಟಕದ ಸಿಂಗಂ... ತಮಿಳುನಾಡಿನಲ್ಲಿ ಕಮಲ ಅರಳಿಸುವ ಪ್ರತಿಜ್ಞೆ!
ಈ ವೇಳೆ ಮಾತನಾಡಿದ್ದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಪರ ಕೆಲಸ ಹಾಗೂ ಕಾರ್ಯವೈಖರಿ, ಜತೆಗೆ ದೇಶದ ಚುಕ್ಕಾಣಿ ಹಿಡಿದಾಗಿನಿಂದಲೂ ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರ ನಿಜಕ್ಕೂ ಮೆಚ್ಚುವಂತಹದ್ದು. ಹೀಗಾಗಿ ನಾನು ಬಿಜೆಪಿ ಸೇರಿಕೊಳ್ಳುತ್ತಿದ್ದೇನೆ ಎಂದಿದ್ದರು.
ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ರಾಷ್ಟ್ರೀಯವಾದಿ ಪಕ್ಷವಾಗಿದ್ದು, ಅದಕ್ಕೆ ಪ್ರಾಶಸ್ತ್ಯ ನೀಡುವ ನಾನು ರಾಜಕೀಯಕ್ಕೆ ಎಂಟ್ರಿ ನೀಡಿದ್ದೇನೆ ಎಂದು ಹೇಳಿಕೊಂಡಿದ್ದರು. ತಮಿಳುನಾಡು ಬಿಜೆಪಿ ಸೇರಿಕೊಂಡಿರುವ ಅಣ್ಣಾಮಲೈ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದು, ತಮಿಳರ ನಾಡಿನಲ್ಲಿ ಕಮಲ ಅರಳಿಸುವ ಭರವಸೆ ನೀಡಿದ್ದಾರೆ.
ಇದಾದ ಬಳಿಕ ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಸುದ್ದಿಗೋಷ್ಠಿ ನಡೆಸಿದ್ದ ಅಣ್ಣಾಮಲೈ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವ ಶಪಥ ಮಾಡಿದ್ದರು.