ಚೆನ್ನೈ: ನಟಿ, ರಾಜಕಾರಣಿ ಖುಷ್ಬೂ ಸುಂದರ್ ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಾರ್ಟಿ ಸೇರಿಕೊಂಡಿದ್ದಾರೆ. ನಿನ್ನೆ ದೆಹಲಿಯಲ್ಲಿ ಕಮಲ ಮುಡಿದ ನಟಿ ಇಂದು ಚೆನ್ನೈಗೆ ಆಗಮಿಸಿದ್ದು, ಅವರಿಗೆ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು.
ಇದನ್ನೂ ಓದಿ: 128 ಕೋಟಿ ಜನ ಒಬ್ಬ ವ್ಯಕ್ತಿಯನ್ನು ನಂಬಿದ್ದಾರೆ, ಅದು ಮೋದಿ: ಬಿಜೆಪಿ ಸೇರಿದ ಖುಷ್ಬೂ ಮಾತು!
ದೆಹಲಿಯಿಂದ ಚೆನ್ನೈ ಏರ್ಪೋರ್ಟ್ಗೆ ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಅವರನ್ನ ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡರು. ಇದೇ ವೇಳೆ, ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರನ್ನ ಗೌರವಿಸುವುದಿಲ್ಲ. ಯಾರಾದ್ರೂ ಪಕ್ಷ ತೊರೆಯಲು ಮುಂದಾದರೆ ಅವರನ್ನ ಮರೆತು ಬಿಡುತ್ತಾರೆ ಎಂದಿದ್ದಾರೆ. ಈ ಹಿಂದೆ ನಾನು ಡಿಎಂಕೆ ಪಕ್ಷ ತೊರೆಯುತ್ತಿದ್ದ ವೇಳೆ ಯಾರನ್ನೂ ದ್ವೇಷಿಸಿಲ್ಲ. ಇದೀಗ ಕಾಂಗ್ರೆಸ್ ಪಕ್ಷ ತೊರೆಯುತ್ತಿದ್ದು, ಯಾರನ್ನೂ ಬೈಯುವುದಿಲ್ಲ. ಆದರೆ, ಬರುವ ದಿನಗಳಲ್ಲಿ ಅವರಿಗೆ ಖಂಡಿತವಾಗಿ ತಿರುಗೇಟು ನೀಡುತ್ತೇನೆ ಎಂದಿದ್ದಾರೆ.
ಮುಂದಿನ ವರ್ಷ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ದ್ರಾವಿಡರ ರಾಜ್ಯದ ಮೇಲೆ ಕಣ್ಣಿಟ್ಟಿರುವ ಭಾರತೀಯ ಜನತಾ ಪಾರ್ಟಿ ಈಗಿನಿಂದಲೇ ಪಕ್ಷ ಬಲವರ್ಧನೆ ಕೆಲಸದಲ್ಲಿ ಮಗ್ನವಾಗಿದೆ. ತಮಿಳುನಾಡಿನ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಖುಷ್ಬೂ ಬಿಜೆಪಿ ರಾಜಾಧ್ಯಕ್ಷ ಎಲ್ ಮುರುಗನ್ ಅವರನ್ನ ಭೇಟಿ ಮಾಡಿದರು.