ನವದೆಹಲಿ: ಕೃಷಿ ಸುಧಾರಣಾ ಕಾಯ್ದೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬಿಜೆಪಿ ಮುಂದಾಗಿದ್ದು, ದೇಶದ ವಿವಿಧೆಡೆ ಅನೇಕ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಇದರಲ್ಲಿ ಜಿಲ್ಲೆ, ಬ್ಲಾಕ್ ಮಟ್ಟದ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಂಬಿತ್ ಪಾತ್ರ ವಿರೋಧ ಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಿವೆ. ಅವುಗಳು ರೈತ ಹೋರಾಟವನ್ನು ಹೈಜಾಕ್ ಮಾಡಲು ಎಷ್ಟೇ ಪ್ರಯತ್ನಿಸಿದರೂ ಸಫಲವಾಗುವುದಿಲ್ಲ. ಈಗಾಗಲೇ ಬಿಜೆಪಿ ಎಲ್ಲಾ ಚುನಾವಣೆಗಳಲ್ಲಿ ಜಯ ಸಾಧಿಸುತ್ತಿರುವುದು ರೈತರಲ್ಲಿ ಬಿಜೆಪಿಯ ಜನಪ್ರಿಯತೆಯನ್ನು ಸಾಬೀತುಪಡಿಸುತ್ತದೆ ಎಂದು ಹೇಳಿದ್ದಾರೆ.
ದೇಶಾದ್ಯಂತ ಸುಮಾರು 700 ಪತ್ರಿಕಾಗೋಷ್ಠಿಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಜನಸಂಪರ್ಕ ಸಭೆಗಳನ್ನು ಕೂಡಾ ಕರೆಯಲಾಗುತ್ತದೆ ಎಂದು ಸಂಬಿತ್ ಪಾತ್ರ ಹೇಳಿದ್ದು, ಕೃಷಿ ಕಾಯ್ದೆಗಳಿಂದ ರೈತರಿಗೆ ಆಗುವ ಅನುಕೂಲತೆಗಳನ್ನು ಮನವರಿಕೆ ಮಾಡಿಕೊಡಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರೈತರ ಬೇಡಿಕೆ ಈಡೇರದಿದ್ದರೆ ಉಪವಾಸ: ಕೇಂದ್ರಕ್ಕೆ ಅಣ್ಣಾ ಹಜಾರೆ ಪತ್ರ
ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಹೇಳಿದ್ದು, ಈಗ ಸದ್ಯಕ್ಕೆ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದು ಕೂಡಾ ಬಿಜೆಪಿಗೆ ಕಗ್ಗಂಟಾಗಿದೆ.
ಅಖಿಲ ಭಾರತ ರೈತ ಸಮನ್ವಯ ಸಮಿತಿ (ಎಐಸಿಸಿಸಿ) ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಿದ್ದು, ಕೃಷಿ ಸುಧಾರಣಾ ಕಾನೂನುಗಳನ್ನು ಬೆಂಬಲಿಸಿದೆ. ಮತ್ತೊಂದೆಡೆ ಆಪ್ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರೈತರಿಗೆ ಬೆಂಬಲವಾಗಿ ಒಂದು ದಿನದ ಉಪವಾಸವನ್ನು ಸೋಮವಾರ ನಡೆಸಿದ್ದಾರೆ.