ನವದೆಹಲಿ: 70 ಕ್ಷೇತ್ರಗಳ ದೆಹಲಿ ವಿಧಾನಸಭೆಗೆ ಈಗಾಗಲೇ ಚುನಾವಣಾ ದಿನಾಂಕ ಘೋಷಣೆಯಾಗಿದ್ದು ಫೆ.8ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಪಣ ತೊಟ್ಟಿರುವ ಆಡಳಿತಾರೂಢ ಆಮ್ ಆದ್ಮಿ ಪಕ್ಷ, ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಾರ್ಟಿ ಕಸರತ್ತು ನಡೆಸಿದ್ದು, ತಮ್ಮದೇ ರಣತಂತ್ರ ರೂಪಿಸಿಕೊಂಡು ಅಖಾಡಕ್ಕೆ ಧುಮುಕಿವೆ.
ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ದೆಹಲಿಯಲ್ಲೂ ಅಧಿಕಾರದ ಗದ್ದುಗೆ ಹಿಡಿಯಲು ಮುಂದಾಗಿದ್ದು, ಮುಂದಿನ 20 ದಿನಗಳಲ್ಲಿ ಬರೋಬ್ಬರಿ 5 ಸಾವಿರ ರ್‍ಯಾಲಿ ನಡೆಸಲು ಯೋಜನೆ ರೂಪಿಸಿಕೊಂಡಿದೆ. ಪ್ರತಿದಿನ 4 ಸಮಾರಂಭಗಳಲ್ಲಿ ಭಾಗಿಯಾಗಲು ಬಿಜೆಪಿ ಹೈಕಮಾಂಡ್ ಈಗಾಗಲೇ ಸೂಚನೆ ನೀಡಿದ್ದು, 200ಕ್ಕೂ ಹೆಚ್ಚು ಜನರನ್ನು ಹೊಂದಿರುವ ಸಮಾರಂಭಗಳಲ್ಲಿ ಭಾಗಿಯಾಗುವಂತೆ ಸೂಚನೆ ನೀಡಿದೆ.
100 ಬಿಜೆಪಿ ಮುಖಂಡರು ಹಾಗೂ ಕೇಂದ್ರ ಕ್ಯಾಬಿನೆಟ್ ಸಚಿವರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ನಿರ್ಧರಿಸಿದ್ದು, ಪ್ರತಿದಿನ 250ಕ್ಕೂ ಪ್ರಚಾರ ಸಭೆಗಳಲ್ಲಿ ಭಾಗಿಯಾಗಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಬಿಜೆಪಿ ಈಗಾಗಲೇ 70 ಕ್ಷೇತ್ರಗಳ ಪೈಕಿ 57 ಕ್ಷೇತ್ರಗಳಿಗೆ ಅಭ್ಯರ್ಥಿ ಫೈನಲ್ ಮಾಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಎಪಿ 67 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ರೆ, ಬಿಜೆಪಿ ಕೇವಲ 3 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತ್ತು. ಕಾಂಗ್ರೆಸ್ ಯಾವುದೇ ಕ್ಷೇತ್ರದಲ್ಲೂ ಗೆಲುವು ಸಾಧಿಸಿರಲಿಲ್ಲ ಎಂಬುದು ಗಮನಾರ್ಹ ಸಂಗತಿ.