ಕೋಲ್ಕತ್ತಾ(ಪಶ್ಚಿಮ ಬಂಗಾಳ): ಜನವರಿಯಿಂದ ನಿರಾಶ್ರಿತರಿಗೆ ಪೌರತ್ವ ನೀಡುವ ಪ್ರಕ್ರಿಯೆಯನ್ನು ಎನ್ಡಿಎ ಸರ್ಕಾರ ಪ್ರಾರಂಭಿಸಲಿದೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಉಸ್ತುವಾರಿ ಕೈಲಾಶ್ ವಿಜಯವರ್ಗಿಯಾ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿಯಲ್ಲಿ ನೆರೆಯ ರಾಷ್ಟ್ರಗಳ ನಿರಾಶ್ರಿತರಿಗೆ 2021ರ ಜನವರಿಯಿಂದ ಪೌರತ್ವ ನೀಡಲಿದೆ. ನಮ್ಮ ಪಕ್ಷ ಯಾವಾಗಲೂ ಭರವಸೆಗಳನ್ನು ಪೂರೈಸುತ್ತದೆ ಎಂದರು.
ಇದನ್ನೂ ಓದಿ: ವಿಶೇಷ ಅಂಕಣ: ಭಾರತದ ಪೌರತ್ವ ಪಡೆಯೋದು ಹೇಗೆ? ಎಷ್ಟು ವಿದೇಶಿಗರಿಗೆ ಪೌರತ್ವ ನೀಡಲಾಗಿದೆ?
ನಮ್ಮ ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ವಿಚಾರಕ್ಕೆ ಕಿರುಕುಳಕ್ಕೊಳಗಾಗಿ ಭಾರತಕ್ಕೆ ಬಂದ ಎಲ್ಲ ಜನರಿಗೆ ಮೋದಿ ಸರ್ಕಾರವು ಪೌರತ್ವ ನೀಡಲಿದೆ. ಸಿಎಂ ಮಮತಾ ಬ್ಯಾನರ್ಜಿ ಸೇರಿ ಪ್ರತಿಪಕ್ಷಗಳು ಕಾಯ್ದೆಯನ್ನು ವಿರೋಧಿಸುತ್ತವೆ. ಮಮತಾ ಬ್ಯಾನರ್ಜಿ ಸರ್ಕಾರವು ರಾಜ್ಯದ ಕೇವಲ ಶೇ.30 ರಷ್ಟು ಜನರ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಿದೆ. ಉಳಿದ ಶೇ.70 ರಷ್ಟು ಜನರು ಅವರಿಗೆ ಲೆಕ್ಕಕ್ಕಿಲ್ಲ. ಪ್ರಧಾನಿ ಮೋದಿ ಅವರ 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಆಜ್ಞೆಯಂತೆ ಕೇಂದ್ರ ಸರ್ಕಾರವು ದೇಶದ ಶೇ.100 ರಷ್ಟು ಜನರನ್ನೂ ನೋಡಿಕೊಳ್ಳುತ್ತದೆ ಎಂದು ತಿಳಿಸಿದರು.
ಅನೇಕ ವಿರೋಧ, ಪ್ರತಿಭಟನೆಗಳ ನಡುವೆಯೂ ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಿಎಎ ಅಂಗೀಕರಿಸಲ್ಪಟ್ಟಿತು. ಈ ಕಾನೂನು 2015 ಕ್ಕಿಂತ ಮೊದಲು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ನಿರಾಶ್ರಿತರಿಗೆ ಪೌರತ್ವವನ್ನು ನೀಡುತ್ತದೆ.