ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೆಹಲಿ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಆಯ್ಕೆ ಕುರಿತು ಬಿಜೆಪಿಯ ಕೇಂದ್ರ ಚುನಾವಣಾ ಕಮಿಟಿಯ ಸಭೆ ಇಲ್ಲಿನ ಪಕ್ಷದ ಕಚೇರಿಯಲ್ಲಿ ತಡರಾತ್ರಿವರೆಗೂ ನಡೆಯಿತು.
ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದುಬಂದಿದ್ದು, ಇಂದು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಳೆದ 20 ವರ್ಷಗಳಿಂದ ದೆಹಲಿ ಗದ್ದುಗೆ ಏರದ ಬಿಜೆಪಿ, ಈ ಬಾರಿ ಅಧಿಕಾರಕ್ಕೆ ಬರಲೇಬೇಕೆಂದು ಪಣ ತೊಟ್ಟಿದೆ. ಅದಕ್ಕಾಗಿ ದೆಹಲಿಯಲ್ಲಿ 5000 ಸಣ್ಣ ಮತ್ತು ಬೃಹತ್ ಸಾರ್ವಜನಿಕ ಸಭೆ, ಸಮಾರಂಭಗಳನ್ನು ಆಯೋಜಿಸುವ ಪ್ಲಾನ್ ಮಾಡಿದೆ ಎಂದು ತಿಳಿದುಬಂದಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ, ಪಕ್ಷದ ಹಿರಿಯ ನಾಯಕರಾದ ಜೆಪಿ ನಡ್ಡಾ, ದೆಹಲಿ ಘಟಕದ ಬಿಜೆಪಿ ಅಧ್ಯಕ್ಷರಾದ ಮನೋಜ್ ತಿವಾರಿ ಸಭೆಯಲ್ಲಿ ಹಾಜರಿದ್ದರು.
ಕಳೆದ ಬಾರಿ 70ಕ್ಕೆ 67 ಕ್ಷೇತ್ರ ಬಾಚಿದ್ದ ಎಎಪಿ ಈಗಾಗಲೇ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಹರಸಾಹಸ ಪಡುತ್ತಿದೆ. ನಾಮಪತ್ರ ಸಲ್ಲಿಕೆಗೆ ಜ.21 ಕೊನೆಯ ದಿನವಾಗಿದ್ದು, ಫೆ.8ರಂದು ಮತದಾನ ಮತ್ತು ಫೆ.11 ರಂದು ಫಲಿತಾಂಶ ಹೊರಬರಲಿದೆ.