ಬೆಂಗಳೂರು: ಅನರ್ಹ ಶಾಸಕರು ಬಿಜೆಪಿ ಸೇರಿದ ಬೆನ್ನಲ್ಲೇ 15 ಕ್ಷೇತ್ರಗಳಲ್ಲಿ ರಾಣೆಬೆನ್ನೂರು ಹೊರತುಪಡಿಸಿ ಇತರ 14 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪ್ರಕಟಿಸಿದೆ.
ಬಿಜೆಪಿ ಕೋರ್ ಕಮಿಟಿ ಸಭೆಯ ನಂತರ ಪಕ್ಷದ ಪ್ರಮುಖರ ಸಭೆ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿರುವ ಬಿಜೆಪಿ, ಹೈಕಮಾಂಡ್ಗೆ ಪಟ್ಟಿ ಕಳುಹಿಸಿಕೊಟ್ಟಿದೆ. ಪಕ್ಷದ ಕೇಂದ್ರ ಚುನಾವಣಾ ಸಮಿತಿ ಮೊದಲ ಹಂತವಾಗಿ 13 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಖೈರುಗೊಳಿಸಿ ಪ್ರಕಟಿಸಿದೆ. ಇದಾದ ಬಳಿಕ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿ ಗೆಲುವು ದಾಖಲು ಮಾಡಿ ತದನಂತರ ರಾಜೀನಾಮೆ ನೀಡಿದ್ದ ಶಿವಾಜಿನಗರ ಕ್ಷೇತ್ರಕ್ಕೂ ಬಿಜೆಪಿ ಟಿಕೆಟ್ ನೀಡಿದ್ದು, ಎಂಎಲ್ಸಿ ಶರವಣಗೆ ಟಿಕೆಟ್ ನೀಡಲಾಗಿದೆ.

ಅಭ್ಯರ್ಥಿಗಳ ಹೆಸರು:
- ಅಥಣಿ-ಮಹೇಶ್ ಕುಮಟಳ್ಳಿ
- ಕಾಗವಾಡ- ಶ್ರೀಮಂತಗೌಡ ಪಾಟೀಲ್
- ಗೋಕಾಕ್-ರಮೇಶ್ ಜಾರಕಿಹೊಳಿ
- ಯಲ್ಲಾಪುರ- ಶಿವರಾಮ ಹೆಬ್ಬಾರ್
- ಹಿರೇಕೆರೂರು- ಬಿ.ಸಿ.ಪಾಟೀಲ್
- ವಿಜಯನಗರ - ಆನಂದ್ ಸಿಂಗ್
- ಚಿಕ್ಕಬಳ್ಳಾಪುರ- ಡಾ. ಸುಧಾಕರ್
- ಕೆ.ಆರ್.ಪುರ- ಬೈರತಿ ಬಸವರಾಜು
- ಯಶವಂತಪುರ-ಎಸ್.ಟಿ.ಸೋಮಶೇಖರ್
- ಮಹಾಲಕ್ಷ್ಮಿ ಲೇಔಟ್- ಕೆ.ಗೋಪಾಲಯ್ಯ
- ಹೊಸಕೋಟೆ- ಎಂಟಿಬಿ ನಾಗರಾಜ್
- ಕೆ.ಆರ್.ಪೇಟೆ- ಕೆ.ಸಿ.ನಾರಾಯಣಗೌಡ
- ಹುಣಸೂರು- ಹೆಚ್.ವಿಶ್ವನಾಥ್
- ಶಿವಾಜಿ ನಗರ: ಶರವಣ
ಶಿವಾಜಿನಗರ ಹಾಗೂ ರಾಣೆಬೆನ್ನೂರು ಕ್ಷೇತ್ರಗಳ ಅಭ್ಯರ್ಥಿ ಹೆಸರನ್ನು ಬಿಜೆಪಿ ಬಾಕಿ ಉಳಿಸಿಕೊಂಡಿತ್ತು. ಶಿವಾಜಿನಗರದಲ್ಲಿ ರೋಷನ್ ಬೇಗ್ ಅವರಿಗೆ ಟಿಕೆಟ್ ನೀಡುವ ಅಥವಾ ಬೆಂಬಲಿಸುವ ಬದಲು ಸ್ಥಳೀಯ ನಾಯಕ, ಮಾಜಿ ಕಾರ್ಪೋರೇಟರ್ ಶರವಣಗೆ ಟಿಕೆಟ್ ನೀಡುವ ಚಿಂತನೆ ನಡೆಸಲಾಗಿತ್ತು. ಕೊನೆಯದಾಗಿ ಮಾಜಿ ಕಾರ್ಪೋರೇಟರ್ಗೆ ಬಿಜೆಪಿ ಮಣೆ ಹಾಕಿದೆ.
ಅದೇ ರೀತಿ ರಾಣೆಬೆನ್ನೂರು ಕ್ಷೇತ್ರದಿಂದ ಸಚಿವ ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ಗೆ ಟಿಕೆಟ್ ಕೊಡಿಸಲು ಪಕ್ಷದಲ್ಲಿ ಲಾಬಿ ನಡೆಯುತ್ತಿರುವ ಕಾರಣ ಒಂದು ಕ್ಷೇತ್ರ ಬಾಕಿ ಉಳಿಸಿಕೊಂಡು ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರನ್ನು ಪ್ರಕಟಿಸಿದೆ ಎಂದು ತಿಳಿದುಬಂದಿದೆ.