ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಡಿಸೆಂಬರ್ 17 ಗುರುವಾರದಂದು ದ್ವಿಪಕ್ಷೀಯ ವರ್ಚುಯಲ್ ಶೃಂಗ ಸಭೆಯಲ್ಲಿ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಶೃಂಗಸಭೆಯಲ್ಲಿ ಉಭಯ ನಾಯಕರು ಕೋವಿಡ್ ನಂತರ ಎರಡು ರಾಷ್ಟ್ರಗಳ ನಡುವಿನ ಸಹಕಾರ ಸೇರಿದಂತೆ ದ್ವಿಪಕ್ಷೀಯ ಸಂಬಂಧ ವೃದ್ದಿಸುವ ಕುರಿತು ಸಮಗ್ರ ಚರ್ಚೆ ನಡೆಸಲಿದ್ದಾರೆ. ಬಾಂಗ್ಲಾ ದೇಶವು ಒಂದು ಪ್ರಮುಖ ರಾಷ್ಟ್ರವಾಗಿದ್ದು, ಭವಿಷ್ಯದಲ್ಲಿ ಭಾರತ ಮತ್ತು ಬಾಂಗ್ಲಾ ನಡುವಿನ ಸಂಬಂಧ ಮುಂದುವರಿಸಲು ವರ್ಚುಯಲ್ ಶೃಂಗಸಭೆಯು ಅತ್ಯಂತ ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ವಿದೇಶಾಂಗ ಮುಖ್ಯಸ್ಥರು ಹೇಳಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಬಾಂಗ್ಲಾದೇಶದ ವಿದೇಶಾಂಗ ನೀತಿ ತಜ್ಞರು ಮತ್ತು ಅಬ್ಸರ್ವರ್ ರಿಸರ್ಚ್ ಫೌಂಡೇಶನ್ (ಒಆರ್ಎಫ್) ನ ಹಿರಿಯ ತಜ್ಞೆ ಜೋಯೀತಾ ಭಟ್ಟಾಚಾರ್ಜಿ, ವರ್ಚುಯಲ್ ಶೃಂಗ ಸಭೆಯು ಕೋವಿಡ್ ಕುರಿತು ಚರ್ಚಿಸಲು ನಮಗೆ ಒಂದು ಉತ್ತಮ ಅವಕಾಶವಾಗಿದೆ. ಅಲ್ಲದೇ, ಮುಂಬರುವ 2021 ರ ದ್ವಿಪಕ್ಷೀಯ ಮಾತುಕತೆಗೆ ಇದು ಒಂದು ಚಾಲನೆಯಾಗಿದೆ ಮತ್ತು ಎರಡು ರಾಷ್ಟ್ರಗಳ ನಡುವಿನ ಸಂಬಂಧ ವೃದ್ದಿಸಲು ಸಹಕಾರಿಯಾಗಿದೆ ಎಂದಿದ್ದಾರೆ.