ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಹಿಂದೂಸ್ತಾನಿ ಅವಾಮ್ ಮೋರ್ಚಾ ಪಕ್ಷದ (ಎಚ್‌ಎಎಂ) ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಜಿತಾನ್ ರಾಮ್ ಮಾಂಝಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೇರಲು ಮುಂದಾಗಿದ್ದಾರೆ.
ಮಾಂಝಿ ನೇತೃತ್ವದ ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಮಹಾಘಟಬಂಧನ ಮಹಾ ಮೈತ್ರಿಯನ್ನು ಆಗಸ್ಟ್ 20ರಂದು ತೊರೆದಿದ್ದರು. ತಮ್ಮ ಪಕ್ಷವನ್ನು ಜನತಾದಳ-ಯುನೈಟೆಡ್ (ಜೆಡಿ-ಯು)ನೊಂದಿಗೆ ವಿಲೀನಗೊಳಿಸಬಹುದು ಎಂಬ ಊಹಾಪೋಹಗಳು ಇದ್ದವು. ಮಾಂಝಿ ಗುರುವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಲಿದ್ದಾರೆ. ಈ ಹಿಂದೆ ಎನ್‌ಡಿಎಯ ಭಾಗವಾಗಿದ್ದ ಮಾಂಝಿ 2018ರಲ್ಲಿ ಮಹಾಘಟಬಂಧನ ಸೇರಲು ಮೈತ್ರಿಯನ್ನು ತೊರೆದಿದ್ದರು.
ಮಾಂಝಿ ತೃತೀಯ ರಂಗದೊಂದಿಗೆ ಹೊಂದಾಣಿಕೆಗೆ ನೋಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು ಇತರ ರಾಜಕೀಯ ಪಕ್ಷಗಳ ನಾಯಕರಾದ ಜೆಎಪಿ, ಪಾಪು ಯಾದವ್ ಮತ್ತು ಮುಖೇಶ್ ಸಹಾನಿ ನೇತೃತ್ವದ ವಿಐಪಿ ಪಕ್ಷದವರನ್ನೂ ಭೇಟಿ ಮಾಡಿದ್ದಾರೆ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ತೃತೀಯ ರಂಗದ ಅಸ್ತಿತ್ವ ಬಹಳ ಕಷ್ಟಕರವಾಗಿದೆ.
ಮತ್ತೊಂದೆಡೆ, ಬಿಜೆಪಿ ಮತ್ತು ಜೆಡಿಯು ಉನ್ನತ ನಾಯಕರು ಬಿಹಾರದಲ್ಲಿ ಮಾಂಝಿ ಮೂಲಕ ದಲಿತ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.