ಕತಿಹಾರ್ (ಬಿಹಾರ): ಬೇರೆ ಬೇರೆ ಸಮುದಾಯಗಳಿಗೆ ಸೇರಿದ ಹುಡುಗ ಮತ್ತು ಹುಡುಗಿಯ ಪ್ರೀತಿ ವಿಚಾರವನ್ನು ಬಿಹಾರದ ಕತಿಹಾರ್ ಜಿಲ್ಲೆಯ ದಂಡಖೋರಾ ಪೊಲೀಸ್ ವ್ಯಾಪ್ತಿಯಲ್ಲಿರುವ ಗ್ರಾಮಸ್ಥರ ಗುಂಪೊಂದು ವಿರೋಧಿಸಿ, ರಾಡ್ನಿಂದ ಹಲ್ಲೆ ಮಾಡಿ ರಸ್ತೆಯಲ್ಲಿ ಅಮಾನವೀಯವಾಗಿ ಮೆರವಣಿಗೆ ಮಾಡಿರುವ ಘಟನೆ ನಡೆದಿದೆ.
ಶುಕ್ರವಾರ ರಾತ್ರಿ ಯುವಕನೋರ್ವ ತನ್ನ ಗೆಳತಿಯನ್ನು ಗ್ರಾಮದಲ್ಲಿ ಭೇಟಿಯಾಗಲು ಹೋದ ಸಂದರ್ಭ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಯುವತಿಯ ಗ್ರಾಮಸ್ಥರು ಈ ಜೋಡಿಯ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ತುಣುಕನ್ನು ವೈರಲ್ ಮಾಡುವುದಾಗಿ ಹಲ್ಲೆಕೋರರು ಬೆದರಿಕೆ ಹಾಕಿ ಯುವಕನ ಎದುರೇ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೆ ಈ ಜೋಡಿಯ ಬೆತ್ತಲೆ ವಿಡಿಯೋ ಮಾಡಿದ್ದಾರೆ.
ಶುಕ್ರವಾರ ರಾತ್ರಿಯೇ ಈ ಗ್ರಾಮಸ್ಥರ ಗುಂಪು ಇಲ್ಲಿನ ಕಾಂಗರೂ ನ್ಯಾಯಾಲಯಕ್ಕೆ(ಹಳ್ಳಿಯ ಸ್ಥಳೀಯ ಸಂಸ್ಥೆ) ಆ ಜೋಡಿಯನ್ನು ಹಾಜರುಪಡಿಸಿದೆ. ನ್ಯಾಯಾಲಯದ ತೀರ್ಪಿನಂತೆ ಯುವಕ-ಯುವತಿಯನ್ನು ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಾರೆ. ಜೊತೆಗೆ ಗ್ರಾಮಸ್ಥರು 2 ಲಕ್ಷ 25 ಸಾವಿರ ರೂ. ಡಂಡ ವಿಧಿಸಿದ್ದಾರೆ.
ಮಾಹಿತಿ ಮೇರೆಗೆ ಪೊಲೀಸರು ಜೋಡಿಯನ್ನು ರಕ್ಷಿಸಿದ್ದಾರೆ. ಯುವತಿ ದಾಖಲಿಸಿದ ದೂರು ಆಧರಿಸಿ ಗ್ರಾಮದ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದಂಡಖೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆಕೋರರ ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ ಎಂದು ಎಸ್ಪಿ ಹರಿ ಮೋಹನ್ ಶುಕ್ಲಾ ತಿಳಿಸಿದ್ದಾರೆ.