ರಾಜಸ್ಥಾನ: ಇಲ್ಲಿನ ಚಿತ್ತೋಡ್ಗಢ್ ಜಿಲ್ಲೆಯ ಸುಪ್ರಸಿದ್ಧ ಸಾವರಿಯಾ ಸೇಠ್ ದೇವಾಲಯಕ್ಕೆ (ಕೃಷ್ಣ ದೇಗುಲ) ಭಕ್ತನೋರ್ವ ಒಂದು ಕೋಟಿ ರೂ. ದೇಣಿಗೆ ನೀಡಿದ್ದು, ಇದು ಈ ದೇವಸ್ಥಾನಕ್ಕೆ ನೀಡಿದ ಅತಿದೊಡ್ಡ ಕೊಡುಗೆಯಾಗಿದೆ.
ಇಂದೋರ್ ಮೂಲದ ಭಕ್ತನು ಒಂದು ಕೋಟಿ 38 ಲಕ್ಷ ರೂಪಾಯಿಗಳ ಡಿಡಿಯನ್ನು ದೇಗುಲಕ್ಕೆ ನೀಡಿದ್ದು, ತನ್ನ ಹೆಸರು ಬಹಿರಂಗಪಡಿಸದಿರಲು ವಿನಂತಿಸಿದ್ದಾನೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕನ್ಹಯ್ಯ ದಾಸ್ ತಿಳಿಸಿದ್ದಾರೆ.
ಕೊರೊನಾ ಲಾಕ್ಡೌನ್ನಿಂದಾಗಿ ಎರಡೂವರೆ ತಿಂಗಳಿನಿಂದ ದೇವಾಲಯವನ್ನು ಮುಚ್ಚಲಾಗಿತ್ತು. ಈ ವೇಳೆ ದೇಗುಲಕ್ಕೆ 20 ರಿಂದ 25 ಕೋಟಿ ರೂ. ನಷ್ಟವಾಗಿದೆ. ಆದರೂ ಕೆಲವು ಭಕ್ತರು ದೇವಸ್ಥಾನದ ಆಡಳಿತ ಮಂಡಳಿಯ ಖಾತೆಗಳಿಗೆ ಆನ್‌ಲೈನ್‌ನಲ್ಲಿ ಹಣವನ್ನು ಕಳುಹಿಸುತ್ತಿದ್ದರು. ಈ ಭಕ್ತ ಹಣ ನೀಡಿರುವುದು ಇಲ್ಲಿನ ಸಿಬ್ಬಂದಿಗೆ ಸಮಾಧಾನದ ವಿಚಾರವಾಗಿದೆ.
ಇನ್ನು ಮುಖ್ಯಮಂತ್ರಿಗಳ ಸಹಾಯ ನಿಧಿ ಮತ್ತು ಪಿಎಂ ಕೇರ್ಸ್ ಫಂಡ್ ಮೂಲಕ ಸಾವರಿಯಾ ಸೇಠ್ ದೇವಾಲಯಕ್ಕೆ 1 ಕೋಟಿ 52 ಲಕ್ಷ ರೂ. ಆರ್ಥಿಕ ನೆರವು ನೀಡಲಾಗಿದೆ.