ಮುಂಬೈ: ಕೊರೊನಾ ವೈರಸ್ ತಡೆಯಲು ಇಡೀ ದೇಶ ಲಾಕ್ಡೌನ್ ಆಗಿರುವ ಈ ಸಂದರ್ಭದಲ್ಲಿ ಕೊರೊನಾ ಪೀಡಿತರ ಚಿಕಿತ್ಸೆಗಾಗಿ ಬಿಗ್ ಬಿ ಅಮಿತಾಭ ಬಚ್ಚನ್ ವಿಶಿಷ್ಟ ಸಲಹೆಯೊಂದನ್ನು ದೇಶದ ಮುಂದಿಟ್ಟಿದ್ದಾರೆ. ಈಗ ಎಲ್ಲ ರೀತಿಯ ರೈಲು ಸಂಚಾರ ಸ್ಥಗಿತಗೊಂಡಿರುವುದರಿಂದ ರೈಲ್ವೆ ಬೋಗಿಗಳನ್ನೇ ಕೊರೊನಾ ವೈರಸ್ ಚಿಕಿತ್ಸೆಗಾಗಿ ಐಸೊಲೇಶನ್ ವಾರ್ಡ್ಗಳನ್ನಾಗಿ ಉಪಯೋಗಿಸಬಹುದು ಎಂದು ಅವರು ತಮ್ಮ ಟ್ವಿಟರ್ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ತಮಗೆ ಯಾರೋ ಒಬ್ಬರು ಈ ಐಡಿಯಾವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು ಎಂದು ಬಿಗ್ ಬಿ ಬರೆದುಕೊಂಡಿದ್ದಾರೆ.
ಟ್ವಿಟರ್ನಲ್ಲಿ ಅವರು ಶೇರ್ ಮಾಡಿಕೊಂಡ ಫಾರ್ವರ್ಡೆಡ್ ಮೆಸೇಜ್ ಹೀಗಿದೆ: 'ಎಲ್ಲ ಸರಕಾರಿ ಅಧಿಕಾರಿಗಳಿಗೆ ನನ್ನದೊಂದು ಸಲಹೆ ಇದೆ. ಈಗ ಎಲ್ಲ ರೈಲು ಸಂಚಾರ ಸ್ಥಗಿತಗೊಂಡಿರುವುದರಿಂದ ವ್ಯಾಗನ್ಗಳು ಖಾಲಿ ನಿಂತಿವೆ. ಪ್ರತಿಯೊಂದರಲ್ಲೂ 20 ಕೋಣೆಗಳಿರುವುದರಿಂದ ಎಲ್ಲ ರೈಲು ವ್ಯಾಗನ್ ಬಳಸಿಕೊಂಡಲ್ಲಿ 60,000 ಬೆಡ್ಗಳ ವ್ಯವಸ್ಥೆ ಮಾಡಬಹುದು. ಅವಶ್ಯಕತೆ ಬಿದ್ದರೆ ಇವನ್ನು ಐಸೊಲೇಶನ್ಗಾಗಿ ಉಪಯೋಗಿಸಬಹುದು. ಆದಾಗ್ಯೂ ಆಸ್ಪತ್ರೆಗಳಿಗೆ ಇವು ಪರ್ಯಾಯವಾಗಲಾರವು.'
ಬಚ್ಚನ್ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಈ ಸಲಹೆಯನ್ನು ಬೆಂಬಲಿಸಿದ್ದಾರೆ. ಇನ್ನು ಕೆಲವರು ಅಂಥ ಪರಿಸ್ಥಿತಿಯೇನೂ ಉದ್ಭವಿಸಲಿಕ್ಕಿಲ್ಲ ಎಂದು ಆಶಾವಾದವನ್ನೂ ವ್ಯಕ್ತಪಡಿಸಿದ್ದಾರೆ.
'ಈ ಐಡಿಯಾ ಸೂಪರ್ ಆಗಿದೆ. ಆದರೆ ಆ ಸಂದರ್ಭ ಬರುವುದು ಬೇಡ' ಎಂದು ಅಭಿಮಾನಿಯೊಬ್ಬ ರಿಪ್ಲೈ ಮಾಡಿದ್ದಾನೆ. 'ತುರ್ತು ಸಂದರ್ಭ ಬಂದಲ್ಲಿ ಇದು ತುಂಬಾ ಸಹಾಯವಾಗಬಹುದು. ಆದರೆ ಭಾರತದ ಜನತೆ ಸರ್ಕಾರದ ಸೂಚನೆಗಳನ್ನು ಪಾಲಿಸುವ ಮೂಲಕ ಅಂಥ ಪರಿಸ್ಥಿತಿ ಎದುರಾಗದಂತೆ ನೋಡಿಕೊಳ್ಳಲಿ.' ಎಂದಿದ್ದಾರೆ ಮತ್ತೊಬ್ಬ ಅಭಿಮಾನಿ.
21 ದಿನಗಳ ಲಾಕ್ಡೌನ್ ಬೆಂಬಲಿಸುವಂತೆ ಬಚ್ಚನ್ ಕವಿತೆಯೊಂದನ್ನು ಬರೆದು ಈ ಮುನ್ನ ಶೇರ್ ಮಾಡಿದ್ದರು. 'ಹಾಥ್ ಹೈ ಜೋಡ್ತೆ, ವಿನಮ್ರತಾ ಸೆ ಹಮ್; ಸುನೆ ಆದೇಶ ಪ್ರಧಾನ್ ಕಾ; ಸದಾ ತುಮ್ ಔರ್ ಹಮ್; ಯೆ ಬಂದಿಶ್ ಜೋ ಲಗಿ ಹೈ, ಜೀವದಾಯೀ ಬನೇಗಿ; 21 ದಿನೋಂ ಕಾ ಸಂಕಲ್ಪ ನಿಶ್ಚಿತ್ ಕೊರೊನಾ ದಫನಾಯೇಗಿ' ಎಂಬ ಈ ಕವನ ಕೂಡ ಬಹಳ ಮೆಚ್ಚುಗೆಗೆ ಪಾತ್ರವಾಗಿತ್ತು.