ನೋಯ್ಡಾ(ಉತ್ತರ ಪ್ರದೇಶ): ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅವರು 'ಆಜಾದ್ ಸಮಾಜ ಪಾರ್ಟಿ' ಎಂಬ ನೂತನ ಪಕ್ಷವನ್ನು ಘೋಷಣೆ ಮಾಡುವ ಮೂಲಕ ರಾಜಕೀಯ ರಂಗ ಪ್ರವೇಶಿಸಿದ್ದಾರೆ.
ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ನೋಯ್ಡಾದ ಬಸಾಯಿ ಗ್ರಾಮದಲ್ಲಿ ಚಂದ್ರಶೇಖರ್ ಆಜಾದ್ ನೂತನ ಪಕ್ಷವನ್ನು ಘೋಷಣೆ ಮಾಡಿದ್ದಾರೆ. ವಿಶೇಷವೆಂದರೆ, ಅವರು ತಮ್ಮ ಪಕ್ಷದ ಧ್ವಜಕ್ಕಾಗಿ ನೀಲಿ ಬಣ್ಣವನ್ನು ಆರಿಸಿಕೊಂಡಿದ್ದಾರೆ.
ನೂತನ ಪಕ್ಷ ಘೋಷಣೆ ಸಮಯದಲ್ಲಿ ಭೀಮ್ ಆರ್ಮಿ ಬೆಂಬಲಿಗರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮೂಲಗಳ ಪ್ರಕಾರ, 28 ಮಾಜಿ ಶಾಸಕರು ಮತ್ತು ಆರು ಮಾಜಿ ಸಂಸದರು ಸಹ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದರು ಎಂದು ತಿಳಿದು ಬಂದಿದೆ.
ಈ ನೂತನ ಪಕ್ಷವು ಸದ್ಯದಲ್ಲೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ, ಸದಸ್ಯತ್ವ ನೋಂದಣಿ ಅಭಿಯಾನವನ್ನು ಪ್ರಾರಂಭಿಸಲಿದೆ.