ನವದೆಹಲಿ: ಡಿಸೆಂಬರ್ ತಿಂಗಳಿಂದ ಮೊಬೈಲ್ ಕರೆಗಳು, ಡೇಟಾ ಶುಲ್ಕವನ್ನು ಹೆಚ್ಚಿಸುವುದಾಗಿ ರಿಲಾಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಹಾಗೂ ವೊಡಾಫೋನ್ ಐಡಿಯಾ ಕಂಪನಿಗಳು ತಿಳಿಸಿವೆ.
ವೊಡಾಫೋನ್ ಐಡಿಯಾ, ಕರೆ ಮತ್ತು ಡೇಟಾ ಶುಲ್ಕಗಳನ್ನು ಶೇ.42 ರಷ್ಟು ಹೆಚ್ಚಿಸುವಂತೆ ಘೋಷಿಸಿದ ಕೆಲವೇ ಗಂಟೆಗಳಲ್ಲೇ ಈಗ ರಿಲಾಯನ್ಸ್ ಜಿಯೋ ಹಾಗೂ ಭಾರ್ತಿ ಏರ್‌ಟೆಲ್ ತಮ್ಮ ಸೇವೆಗಳ ಕುರಿತು ಮಾಹಿತಿ ಹೊರಹಾಕಿವೆ.
ರಿಲಾಯನ್ಸ್ ಜಿಯೋ:
ಡಿಸೆಂಬರ್ 6 ರಿಂದ ಹೊಸ ಅನಿಯಮಿತ ಯೋಜನೆಗಳನ್ನು ಪ್ರಾರಂಭಿಸುವುದಾಗಿ ರಿಲಾಯನ್ಸ್ ಜಿಯೋ ಇಂದು ತಿಳಿಸಿದ್ದು, ಇದು ಧ್ವನಿ ಕರೆ ಮತ್ತು ಡೇಟಾ ಸುಂಕವನ್ನು ಶೇಕಡಾ 40 ರಷ್ಟು ಹೆಚ್ಚಿಸುತ್ತದೆ.
ಜಿಯೋ ಅನಿಯಮಿತ ಧ್ವನಿ ಮತ್ತು ಡೇಟಾದೊಂದಿಗೆ ಹೊಸ ಆಲ್-ಇನ್-ಒನ್ ಯೋಜನೆಯನ್ನು ಪರಿಚಯಿಸಲಿದೆ. ಈ ಹೊಸ ಯೋಜನೆಗಳ ಅಡಿಯಲ್ಲಿ ಗ್ರಾಹಕರು ಶೇ. 300 ರಷ್ಟು ಹೆಚ್ಚಿನ ಪ್ರಯೋಜನಗಳನ್ನು ಪಡೆಯಲಿದ್ದಾರೆ ಹಾಗೂ ಇತರ ಮೊಬೈಲ್ ನೆಟ್‌ವರ್ಕ್‌ಗಳಿಗೆ ಜಿಯೋ ಚಂದಾದಾರರು ಕರೆ ಮಾಡಲು ಇದು ನ್ಯಾಯಯುತ ಬಳಕೆ ನೀತಿಯನ್ನು (FUP- Fair Usage Policy) ನೀಡುತ್ತದೆ ಎಂದು ಮುಖೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಜಿಯೋ ಕಂಪನಿ ತಿಳಿಸಿದೆ.
ಭಾರ್ತಿ ಏರ್‌ಟೆಲ್ :
ಟೆಲಿಕಾಂ ಆಪರೇಟರ್ ಭಾರ್ತಿ ಏರ್‌ಟೆಲ್ ಕೂಡ ಇಂದು ಹೊಸ ಯೋಜನೆಗಳನ್ನು ಪ್ರಕಟಿಸಿದ್ದು, ಅದರ ಪೂರ್ವ-ಪಾವತಿ ಗ್ರಾಹಕರಿಗೆ ಕರೆ ಮತ್ತು ಡೇಟಾ ಶುಲ್ಕಗಳನ್ನು ಡಿಸೆಂಬರ್ 3 ರಿಂದ ಶೇಕಡಾ 42 ರಷ್ಟು ಹೆಚ್ಚಿಸುವುದಾಗಿ ತಿಳಿಸಿದೆ. ಆದರೆ ಭಾರ್ತಿ ಏರ್‌ಟೆಲ್ ಘೋಷಿಸಿದ ಸುಂಕದ ಹೆಚ್ಚಳವು ವೊಡಾಫೋನ್ ಐಡಿಯಾ ಘೋಷಿಸಿದ ಹೊಸ ದರಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆಯಾಗಿದೆ.
2 ದಿನಗಳು, 28 ದಿನಗಳು, 84 ದಿನಗಳು ಹಾಗೂ 365 ದಿನಗಳ ವ್ಯಾಲಿಡಿಟಿಯೊಂದಿಗೆ 'ಅನಿಯಮಿತ' ('unlimited') ವಿಭಾಗದಲ್ಲಿ ಹೊಸ ಯೋಜನೆಗಳನ್ನು ಏರ್‌ಟೆಲ್ ಘೋಷಿಸಿದೆ. ಈ ಹೊಸ ಯೋಜನೆ, ದಿನಕ್ಕೆ ಕೇವಲ 50 ಪೈಸೆ ಇಂದ 2.85 ರೂ.ಗಳವರೆಗೆ ಸುಂಕ ಹೆಚ್ಚಳವನ್ನು ಪ್ರತಿನಿಧಿಸುತ್ತವೆ ಮತ್ತು ಉದಾರವಾದ ಡೇಟಾ ಮತ್ತು ಕರೆ ಪ್ರಯೋಜನಗಳನ್ನು ನೀಡಲಿದ್ದು, ಈ ಸುಂಕಗಳು ಮಂಗಳವಾರದಿಂದ ಅನ್ವಯವಾಗಲಿದೆ.