ನವದೆಹಲಿ: ವಿದ್ಯಾರ್ಥಿಗಳಿಗೆ ಅತಿ ಪ್ರಿಯವಾದ ಭಾರತದ ಶೈಕ್ಷಣಿಕ ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ ಎಂದು ಕ್ಯುಎಸ್ ಸ್ಟುಡೆಂಟ್ ಸಿಟಿ ರ‍್ಯಾಂಕಿಂಗ್ 2018ರ ವರದಿಯಲ್ಲಿ ಬಹಿರಂಗಗೊಂಡಿದೆ.
ಇಂದು ಪ್ರಕಟಗೊಂಡ ವರದಿಯಲ್ಲಿ ವಿಶ್ವವಿದ್ಯಾಲಯಗಳ ಕಾರ್ಯವೈಖರಿ, ಉದ್ಯೋಗಾವಕಾಶ, ನಗರ ಜೀವನ, ಅಪೇಕ್ಷಣೀಯತೆ, ಜೀವನ ಗುಣಮಟ್ಟ ಹಾಗೂ ವಿದ್ಯಾರ್ಥಿಗಳಲ್ಲಿನ ವೈವಿಧ್ಯತೆ ಆಧರಿಸಿ ರ‍್ಯಾಂಕಿಂಗ್ ನೀಡಲಾಗಿದೆ.
ವಿಶ್ವದ 100 ವಿದ್ಯಾರ್ಥಿಸ್ನೇಹಿ ನಗರಗಳಲ್ಲಿ ಬೆಂಗಳೂರು 81ನೇ ಸ್ಥಾನದಲ್ಲಿದ್ದು, ಮುಂಬೈ 85ನೇ ಸ್ಥಾನದಲ್ಲಿದೆ. ಈ ಎರಡೂ ನಗರಗಳ ಹೊರತಾಗಿ ಭಾರತದ ಬೇರಾವ ನಗರಗಳೂ 100ರ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ದೆಹಲಿ 113 ಹಾಗೂ ಚೆನ್ನೈ 115ನೇ ಸ್ಥಾನದಲ್ಲಿವೆ.
ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಐಟಿ ತಾಣವಾಗಿರುವ ಬೆಂಗಳೂರು, ವಿದ್ಯಾರ್ಥಿಗಳ ನೆಚ್ಚಿನ ತಾಣವಾಗಿದೆ ಎಂದು ವರದಿ ಹೇಳಿದೆ. ಅಂತೆಯೇ ವಿಶ್ವಮಟ್ಟದಲ್ಲಿ ಲಂಡನ್ ಈ ಪಟ್ಟಿಯಲ್ಲಿ ಮೊದಲಿದ್ದು, ಟೋಕಿಯೋ ಎರಡನೇ ಸ್ಥಾನ, ಸಿಯೋಲ್ 10 ಹಾಗೂ ಹಾಂಕಾಂಗ್ 14 ನೇ ಸ್ಥಾನ ಪಡೆದಿವೆ. ವರ್ಷದಿಂದ ವರ್ಷಕ್ಕೆ ಶಿಕ್ಷಣಕ್ಕಾಗಿ ಲಂಡನ್ಗೆ ತೆರಳುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ವರದಿ ತಿಳಿಸಿದೆ.