ಕೋಲ್ಕತಾ: ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ವಿಶ್ರಾಂತಿ ನೀಡಿಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ.
ಒಂದು ವಾರ ಕೆಲಸ ಮಾಡಿದ ಬಳಿಕ ವೈದ್ಯರು, ದಾದಿಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಏಳು ದಿನಗಳ ರಜೆ ನೀಡುವುದಾಗಿ ಘೋಷಿಸಿದೆ.
ಆರೋಗ್ಯ ಸಚಿವಾಲಯದೊಂದಿಗೆ ಚರ್ಚಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
"ವೈದ್ಯರು, ದಾದಿಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರು ಯಾವುದೇ ವಿಶ್ರಾಂತಿ ಪಡೆಯುತ್ತಿಲ್ಲ. ಆದ್ದರಿಂದ ಇಂದಿನಿಂದ ಅವರಿಗೆ ಒಂದು ವಾರ ಕೆಲಸ ಮಾಡಿದ ನಂತರ ಒಂದು ವಾರದ ವಿಶ್ರಾಂತಿ ಸಿಗಲಿದೆ. ಆರೋಗ್ಯ ಸಚಿವಾಲಯದೊಂದಿಗೆ ಸಮಾಲೋಚಿಸಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ" ಎಂದು ಬ್ಯಾನರ್ಜಿ ಹೇಳಿದ್ದಾರೆ.
ಪೊಲೀಸ್ ಸಿಬ್ಬಂದಿಯ ಕೆಲಸದ ಸಮಯವನ್ನು ಕಡಿಮೆ ಮಾಡಲು ಕೂಡಾ ಮಮತಾ ಬ್ಯಾನರ್ಜಿ ಪೊಲೀಸ್ ಉನ್ನತ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.