ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೆ ತರಲು ನಿರಾಕಿರಿಸಿದ್ದರಿಂದ ಪ್ರತಿಯೊಬ್ಬ ರೈತರಿಗೆ 12 ಸಾವಿರ ರೂಪಾಯಿ ನಷ್ಟವಾಗಿದೆ ಎಂದು ರಾಜ್ಯಪಾಲ ಜಗದೀಪ್ ಧಂಕರ್ ಹೇಳಿದ್ದಾರೆ.
ಸಿಎಂ ಮಮತಾ ಬ್ಯಾನರ್ಜಿ ಅವರ ನಿಲುವಿನಿಂದಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೇಂದ್ರ ಸರ್ಕಾರ ವಿರುದ್ಧದ ಧೋರಣೆಯಿಂದ ರಾಜ್ಯಕ್ಕೆ 8,400 ಕೋಟಿ ರೂಪಾಯಿ ನಷ್ಟವಾಗಿದೆ ಎಂದಿದ್ದಾರೆ.
ಸೆಪ್ಟೆಂಬರ್ನಲ್ಲಿ ಕೇಂದ್ರ ಕೃಷಿ ಸಚಿವರಿಗೆ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದು, ರಾಜ್ಯ ಸರ್ಕಾರದ ಮೂಲಕ ಹಣ ರವಾನಿಸಿದರೆ ಪಶ್ಚಿಮ ಬಂಗಾಳದಲ್ಲಿ ಪಿಎಂ ಕಿಸಾನ್ ಯೋಜನೆ ಜಾರಿಗೆ ಬರಲಿದೆ ಎಂದು ಉಲ್ಲೇಖಿಸಿದ್ದಾರೆ.
2018 ರ ಡಿಸೆಂಬರ್ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಈ ಯೋಜನೆಯು ರೈತರಿಗೆ ವಾರ್ಷಿಕವಾಗಿ ಮೂರು ಸಮಾನ ಕಂತುಗಳಲ್ಲಿ 6 ಸಾವಿರ ರೂಪಾಯಿ ವಿತರಿಸಲು ಯೋಜನೆ ರೂಪಿಸಿತು.
ಆ ಸಮಯದಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ನಿರಾಕರಿಸಿತ್ತು. ಅದಕ್ಕಾಗಿ 70 ಲಕ್ಷ ರೈತರು ಕೇಂದ್ರದ ಈ ಯೋಜನೆಯಿಂದ ವಂಚಿತರಾಗಿದ್ದಾರೆಂದು ಧಂಕರ್ ಟೀಕಿಸಿದ್ದರು.