ಕೋಲ್ಕತ್ತಾ: ಲಾಕ್ಡೌನ್ನಿಂದಾಗಿ ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ಪಂಜಾಬ್‌ನಲ್ಲಿ ಸಿಲುಕಿರುವ 30,000 ಜನರನ್ನು ಕರೆ ತರಲು ಪಶ್ಚಿಮ ಬಂಗಾಳ ಸರ್ಕಾರ ವಿಶೇಷ ರೈಲು ವ್ಯವಸ್ಥೆ ಮಾಡುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲಾಕ್ಡೌನ್ನಿಂದ ಬೇರೆ ರಾಜ್ಯಗಳಲ್ಲಿ ಸಿಲುಕಿರುವ ಜನರಲ್ಲಿ ಹೆಚ್ಚಾಗಿ ವಲಸೆ ಕಾರ್ಮಿಕರು, ರೋಗಿಗಳು ಮತ್ತು ಅವರ ಪರಿಚಾರಕರು, ವಿದ್ಯಾರ್ಥಿಗಳು, ಯಾತ್ರಿಕರು ಮತ್ತು ಪಶ್ಚಿಮ ಬಂಗಾಳದ ಪ್ರವಾಸಿಗರಿದ್ದಾರೆ. ಈ ನಿಟ್ಟಿನಲ್ಲಿ ಇತರ ರಾಜ್ಯ ಸರ್ಕಾರಗಳ ಅಧಿಕಾರಿಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಎಲ್ಲವನ್ನೂ ಅಂತಿಮಗೊಳಿಸಲಾಗಿದೆ. ನಮ್ಮ ನೋಡಲ್ ಅಧಿಕಾರಿಗಳು ಬೆಳವಣಿಗೆಗಳ ಮೇಲೆ ನಿಗಾ ಇಡುತ್ತಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ನಾಲ್ಕು ರಾಜ್ಯಗಳಲ್ಲಿ ಒಟ್ಟು 31,224 ಜನರು ಸಿಲುಕಿದ್ದು, ಅವರಲ್ಲಿ ಅರ್ಧಕ್ಕಿಂತ ಹೆಚ್ಚು (17,000) ಜನ ತೆಲಂಗಾಣದಲ್ಲಿದ್ದಾರೆ. ಪಶ್ಚಿಮ ಬಂಗಾಳದ ಸುಮಾರು 7,500 ಜನರನ್ನು ಕರೆ ತರುವ ಮೂರು ರೈಲುಗಳು, ಶನಿವಾರ ಕರ್ನಾಟಕದ ಬೆಂಗಳೂರಿನಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿ ಬಂಕುರಾ, ಪುರುಲಿಯಾ ಮತ್ತು ರಾಜ್ಯದ ಹೊಸ ಜಲ್ಪೈಗುರಿ ನಿಲ್ದಾಣಗಳನ್ನು ಭಾನುವಾರ ಮತ್ತು ಸೋಮವಾರ ತಲುಪಲಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸುಮಾರು 2,418 ಜನರೊಂದಿಗೆ ಎರಡು ರೈಲುಗಳು, ಹೆಚ್ಚಾಗಿ ರೋಗಿಗಳು ಸೋಮವಾರ ತಮಿಳುನಾಡಿನ ವೆಲ್ಲೂರಿನಿಂದ ಹೊರಟು ಮಂಗಳವಾರ ರಾಜ್ಯದ ಖರಗ್‌ಪುರ ಮತ್ತು ಹೌರಾ ರೈಲು ನಿಲ್ದಾಣಗಳನ್ನು ತಲುಪಲಿದ್ದಾರೆ ಎಂದು ಅವರು ಹೇಳಿದರು.
ಪಂಜಾಬ್‌ನಲ್ಲಿ ಸಿಕ್ಕಿಬಿದ್ದ ಜನರನ್ನು ಕರೆ ತರಲು ಎರಡು ರೈಲುಗಳನ್ನು ವ್ಯವಸ್ಥೆ ಮಾಡಲಾಗಿದೆ. ಒಂದು ರೈಲು ಭಾನುವಾರ ಹೂಗ್ಲಿ ಜಿಲ್ಲೆಯ ಬಂಡೆಲ್ ರೈಲ್ವೆ ನಿಲ್ದಾಣಕ್ಕೆ ಉತ್ತರ ಪ್ರದೇಶದಿಂದ ಹೊರಡುತ್ತದೆ ಮತ್ತು ಇನ್ನೊಂದು ರೈಲು ಸೋಮವಾರ ಪಶ್ಚಿಮ ಬುರ್ದ್ವಾನ್ ಜಿಲ್ಲೆಯ ದುರ್ಗಾಪುರಕ್ಕೆ ಹೊರಡಲಿದೆ ಎಂದರು.
ತೆಲಂಗಾಣದಲ್ಲಿ ಸಿಲುಕಿರುವ 17,000 ಜನರನ್ನು ಮುಂದಿನ ವಾರ ಪಶ್ಚಿಮ ಬಂಗಾಳಕ್ಕೆ ಕರೆ ತರಲಾಗುವುದು. ರಾಜಸ್ಥಾನದ ಕೋಟಾದಿಂದ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹಿಂದಿರುಗಿಸಲು ರಾಜ್ಯ ಸರ್ಕಾರ ಕಳೆದ ವಾರ ಅನುಕೂಲ ಕಲ್ಪಿಸಿತ್ತು.