ಬೀಜಿಂಗ್ (ಚೀನಾ): ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣದಿಂದ ಚೀನಾ ತನ್ನ ರಾಜಧಾನಿ ಬೀಜಿಂಗ್ನಿಂದ ಹೊರಡುವ ಹಾಗೂ ಬೀಜಿಂಗ್ಗೆ ಬರುವ ನೂರಾರು ವಿಮಾನಗಳನ್ನು ರದ್ದು ಮಾಡಿದೆ.
ಕೊರೊನಾ ಸೋಂಕಿತರ ಸಂಖ್ಯೆ ಬೀಜಿಂಗ್ನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಗರದಲ್ಲಿ ತೀವ್ರ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಬೀಜಿಂಗ್ನಿಂದ ಹೊರ ಪ್ರಯಾಣಿಸುವ ಅನಿವಾರ್ಯತೆ ಇದ್ದವರು ತಾವು ಹೊರಡುವ ಏಳು ದಿನ ಮೊದಲು ಕೊರೊನಾ ಸೋಂಕು ಪತ್ತೆ ಹೆಚ್ಚುವ ನ್ಯೂಕ್ಲಿಕ್ ಆಸಿಡ್ ಟೆಸ್ಟ್ ವರದಿಯ ಫಲಿತಾಂಶವನ್ನು ಬಹಿರಂಗಪಡಿಸಬೇಕು. ವರದಿಯ ಫಲಿತಾಂಶ ನೆಗೆಟಿವ್ ಇದ್ದರೆ ಮಾತ್ರ ಅವರನ್ನು ಬೇರೆಡೆಗೆ ತೆರಳಲು ಅವಕಾಶ ಮಾಡಿಕೊಡಲಾಗುತ್ತದೆ.
ಬೀಜಿಂಗ್ ಇಂಟರ್ನ್ಯಾಷನಲ್ ಏರ್ಪೋರ್ಟ್ನಿಂದ ನಿತ್ಯ ಸುಮಾರು 786 ವಿಮಾನಗಳು ಹಾರಾಟ ನಡೆಸುತ್ತವೆ. ಆದರೆ ಈಗ 313 ವಿಮಾನಗಳನ್ನು ಅಂದ್ರೆ ಶೇಕಡಾ 40ರಷ್ಟು ವಿಮಾನಗಳ ಹಾರಾಟವನ್ನು ನಿರ್ಬಂಧಿಸಲಾಗಿದೆ.
ಬೀಜಿಂಗ್ನ ಆಹಾರ ಮಾರುಕಟ್ಟೆಯೊಂದರಲ್ಲಿ ಕೊರೊನಾ ಸೋಂಕಿತರು ಕಾಣಿಸಿಕೊಂಡಿದ್ದು, ಕೇವಲ 24 ಗಂಟೆಯಲ್ಲಿ 44 ಕೊರೊನಾ ಸೋಂಕಿತರು ನಗರದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಚೀನಾ ರಾಜಧಾನಿಯಲ್ಲಿ ಯುದ್ಧದ ಪರಿಸ್ಥಿತಿ ಇದೆ ಎಂದು ಅಲ್ಲಿನ ಪ್ರಾಧಿಕಾರಗಳು ಹೇಳುತ್ತಿವೆ.
ಚೀನಾದಲ್ಲಿ ಒಟ್ಟು 83,265 ಮಂದಿ ಕೊರೊನಾ ಸೋಂಕಿತರಿದ್ದು, ಸುಮಾರು 78,379 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಇದುವರೆಗೆ 4,634 ಮಂದಿ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ.